ಬೆಂಗಳೂರು : ಎರಡು ದಿನಗಳ ಹಿಂದಷ್ಟೆ ನೇಮಕವಾದ ಜೆ.ಸಿ.ನಗರದ ನೋಡಲ್ ಅಧಿಕಾರಿ ಎಸ್.ಜಿ. ರವೀಂದ್ರ ತಮ್ಮ ಕಾರ್ಯವ್ಯಾಪ್ತಿ ಮೀರಿ ಮನೆಗಳು ಮತ್ತು ವಾಣಿಜ್ಯ ಮಳಿಗೆಗಳನ್ನು ಒಡೆದುಹಾಕಲು ಮುಂದಾಗಿದ್ದಾರೆ ಎಂದು ಸ್ಥಳೀಯರು ಬುಧವಾರ ರಸ್ತೆ ತಡೆ ನಡೆಸಿದ್ದಾರೆ.
ಬಿಬಿಎಂಪಿಯಲ್ಲಿ ಜನಪ್ರತಿನಿಧಿಗಳು ಅಧಿಕಾರದಲ್ಲಿರದ ಕಾರಣ, ವಾರ್ಡ್‌ವಾರು ಸಮಸ್ಯೆ ಆಲಿಸಿ ಪರಿಹಾರಕ್ಕೆ ಸೆ.20 ರಂದು ನೋಡಲ್ ಅಧಿಕಾರಿ ನೇಮಕ ಮಾಡಲಾಗಿದೆ. ಸಭೆ ನಡೆಸಿ ತಾಳ್ಮೆಯಿಂದ ಸಾರ್ವಜನಿಕರೊಂದಿಗೆ ವರ್ತಿಸಬೇಕು ಎಂದು ಪಾಲಿಕೆ ಆಯುಕ್ತರು ಸೂಚನೆ ನೀಡಿದ್ದರೂ ಎಸ್.ಜಿ. ರವೀಂದ್ರ ಕೆಲವು ಕಟ್ಟಡ ಮತ್ತು ವಾಣಿಜ್ಯ ಮಳಿಗೆಗಳನ್ನು ಅನಧಿಕೃತವಾಗಿವೆ ಎಂದು ದುಂಡಾವರ್ತನೆ ತೋರಿ ತೆರವುಗೊಳಿಸಲು ಮುಂದಾಗಿದ್ದಾರೆ ಆಕ್ರೋಶ ವ್ಯಕ್ತಪಡಿಸಿದರು. ಅಂಗವಿಕಲ ವ್ಯಕ್ತಿ ಕಳೆದ 10 ವರ್ಷಕ್ಕೂ ಅಧಿಕ ಕಾಲದಿಂದ ವ್ಯಾಪಾರ ಮಾಡುತ್ತಿದ್ದಾರೆ. ಅಧಿಕಾರಿಗಳು ಏಕಾಏಕಿ ಅಂಗಡಿ ಪರವಾನಗಿ ಕೇಳಿದ್ದು, ಪರವಾನಗಿ ಪತ್ರವಿಲ್ಲದ ಕಾರಣ ಮಳಿಗೆ ಒಡೆದುಹಾಕಲು ಮುಂದಾಗಿದ್ದಾರೆ. ಆಗ ಸಾರ್ವಜನಿಕರು ಜಮಾಯಿಸಿ ವಾಣಿಜ್ಯ ಮಳಿಗೆ ಒಡೆಯುವುದನ್ನು ತಡೆದು ಪಾಲಿಕೆ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ಮಾಡಿದರು. ನೋಡಲ್ ಅಧಿಕಾರಿಯನ್ನು ಕೂಡಲೆ ವಾಪಸ್ ಕರೆಸಿಕೊಳ್ಳಬೇಕು ಎಂದು ಆಗ್ರಹಿಸಿದರು.
ಅಧಿಕಾರಿಗೆ ಶಾಸಕ ಭೈರತಿ ಸುರೇಶ್ ತರಾಟೆ : ಸ್ಥಳೀಯ ಶಾಸಕ ಭೈರತಿ ಸುರೇಶ್ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ವಾಣಿಜ್ಯ ಮಳಿಗೆ ತೆರವು ಮಾಡುವುದನ್ನು ತಡೆದರು. ನಂತರ, ನೋಡಲ್ ಅಧಿಕಾರಿ ಜತೆ ಮಾತನಾಡಿ, ನೀವು ಕೇವಲ ನೋಡಲ್ ಅಧಿಕಾರಿಯಾಗಿದ್ದು, ಸಮಸ್ಯೆ ಆಲಿಸಿ ಪರಿಹಾರ ಒದಗಿಸಬೇಕು. ಅದನ್ನು ಬಿಟ್ಟು ತೆರವು ಮಾಡಲು ಯಾರು ಅಧಿಕಾರ ಕೊಟ್ಟವರ‌್ಯಾರು?. ನೀವು ತೆರವು ಮಾಡುವ ಮುನ್ನ ಜನರ ಪ್ರತಿಭಟನೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ನೋಡಲ್ ಅಧಿಕಾರಿ ಬದಲಾವಣೆಗೆ ಆಗ್ರಹ: ಜೆ.ಸಿ. ನಗರ ನೋಡಲ್ ಅಧಿಕಾರಿ ರವೀಂದ್ರ ಅವರನ್ನು ನಮ್ಮ ವಾರ್ಡ್‌ನಿಂದ ಕೂಡಲೆ ಬೇರೆಡೆಗೆ ವರ್ಗಾಯಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಕೂಡಲೆ, ಶಾಸಕ ಭೈರತಿ ಸುರೇಶ್, ಪಾಲಿಕೆ ಆಯುಕ್ತರಿಗೆ ಕರೆ ಮಾಡಿ ನೋಡಲ್ ಅಧಿಕಾರಿ ಬದಲಾಯಿಸಬೇಕು. ಮನೆ ಅಥವಾ ಮಳಿಗೆ ತೆರವು ಮಾಡದೆ, ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯ ಮಾತ್ರ ಮಾಡಬೇಕು. ನನ್ನ ವಿಧಾನಸಭಾ ಕ್ಷೇತ್ರದ ಯಾವುದೇ ವಾರ್ಡ್‌ನಲ್ಲಿ ಇಂತಹ ಸಮಸ್ಯೆಗಳಾಗದಂತೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.
ನೋಡಲ್ ಅಧಿಕಾರಗಳು ಸಮಸ್ಯೆ ಆಲಿಸಿ ಪರಿಹಾರ ಕ್ರಮ ಕೈಗೊಳ್ಳಬೇಕು. ಅದನ್ನು ಬಿಟ್ಟು ಕರೊನಾ ಸೋಂಕಿನಿಂದ ಕಳೆದ ಹಲವು ತಿಂಗಳಿಂದ ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ತೊಂದರೆ ನೀಡಿದರೆ ಸುಮ್ಮನಿರುವುದಿಲ್ಲ. ಸಾರ್ವಜನಿಕರ ಮೇಲೆ ಅಧಿಕಾರಿಗಳ ದರ್ಪವನ್ನು ನಾವು ಸಹಿಸುವುದಿಲ್ಲ.
ಭೈರತಿ ಸುರೇಶ್, ಶಾಸಕ