ಸಿದ್ದಾಪುರ: ನೆಲ್ಯಹುದಿಕೇರಿಯ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಎಟಿಎಂ ದುರವಸ್ಥೆ ಹಾಗೂ ಸಿಬ್ಬಂದಿ ಕೊರತೆಯನ್ನು ಕೂಡಲೇ ಸರಿಪಡಿಸುವಂತೆ ಆಗ್ರಹಿಸಿ ಶನಿವಾರ ಸಾರ್ವಜನಿಕರು ಬ್ಯಾಂಕ್ ಮುಂದೆ ಪ್ರತಿಭಟನೆ ನಡೆಸಿದರು.
ಗ್ರಾಮಸ್ಥ ಪಿ.ಆರ್.ಭರತ್ ಮಾತನಾಡಿ, ಹತ್ತು ಸಾವಿರಕ್ಕೂ ಅಧಿಕ ಜನಸಂಖ್ಯೆ ಇರುವ ಗ್ರಾಮದಲ್ಲಿ ಕೇವಲ ಒಂದು ಬ್ಯಾಂಕ್ ಇದ್ದು, ಅದರ ಎಟಿಎಂ ಮಷಿನ್ ಬ್ಯಾಂಕಿನ ಒಳ ಭಾಗದಲ್ಲಿರಿಸಲಾಗಿದೆ. ಇದರಿಂದ ಎಟಿಎಂ ಗ್ರಾಹಕರಿಗೆ ಸರಿಯಾದ ಸೇವೆ ದೊರೆಯುತ್ತಿಲ್ಲ. ಕೂಡಲೇ ಎಟಿಎಂ ಯಂತ್ರವನ್ನು ಬ್ಯಾಂಕ್‌ನ ಹೊರ ಭಾಗದಲ್ಲಿ ಸ್ಥಾಪಿಸಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಸೇವೆ ಒದಗಿಸಬೇಕೆಂದು ಒತ್ತಾಯಿಸಿದರು.
ಸ್ಥಳೀಯ ಅಜೀಜ್ ಮಾತನಾಡಿ, ಬ್ಯಾಂಕ್‌ನಲ್ಲಿ ಸಿಬ್ಬಂದಿ ಕೊರತೆ ಇದ್ದು, ಗ್ರಾಹಕರಿಗೆ ಸೂಕ್ತ ಸೇವೆ ದೊರೆಯುತ್ತಿಲ್ಲ. ಎಂಟರಿಂದ ಹತ್ತು ಜನ ಸಿಬ್ಬಂದಿ ಕೆಲಸ ಮಾಡ ಬೇಕಿರುವ ಕಡೆ ಕೇವಲ ಮೂರರಿಂದ ನಾಲ್ಕು ಜನ ಇದ್ದಾರೆ. ಕಾರ್ಮಿಕರೇ ಹೆಚ್ಚಿರುವ ಈ ಪ್ರದೇಶದಲ್ಲಿ ಬ್ಯಾಂಕ್‌ನ ಅವ್ಯವಸ್ಥೆಯಿಂದಾಗಿ ಬಹಳ ತೊಂದರೆ ಎದುರಾಗುತ್ತಿದೆ ಎಂದು ದೂರಿದರು.
ಪ್ರತಿಭಟನೆ ಬಳಿಕ ಸಮಸ್ಯೆಗಳನ್ನು ಸರಿಪಡಿಸುವಂತೆ ಆಗ್ರಹಿಸಿ ನೂರಾರು ಸಾರ್ವಜನಿಕರ ಸಹಿಯೊಂದಿಗೆ ಮನವಿ ಪತ್ರವನ್ನು ಬ್ಯಾಂಕ್ ವ್ಯವಸ್ಥಾಪಕ ಸಜೇಶ್ ಕುಮಾರ್ ಅವರಿಗೆ ಸಲ್ಲಿಸಲಾಯಿತು.
ಗ್ರಾಪಂ ಅಧ್ಯಕ್ಷೆ ಧನಲಕ್ಷ್ಮೀ, ಸದಸ್ಯರಾದ ಸುಹಾದಾ ಅಶ್ರಫ್, ಮುಸ್ತಫ, ಸಫಿಯಾ, ಅಫ್ಸಲ್, ಸಿಂಧು, ಪ್ರಮುಖರಾದ ಉದಯ ಕುಮಾರ್, ಎನ್.ಎಸ್.ವಿಜು, ಸುರೇಂದ್ರನ್ ಬಂಡ್ರಾಣಿ, ಮಣಿ, ಅಯ್ಯೂಬ್ ಇತರರು ಇದ್ದರು.