ಜಿಲ್ಲೆ

4 ರಂದು ಬಾಂಗ್ಲಾ ಹಿಂದುಗಳ ಮೇಲಿನ ದೌರ್ಜನ್ಯ ಖಂಡಿಸಿ ಬೃಹತ್​ ಪ್ರತಿಭಟನೆ

ಜಗನ್ನಾಥ್ ಕಾಳೇನಹಳ್ಳಿ

ತುಮಕೂರು: ಬಾಂಗ್ಲಾ ದೇಶದಲ್ಲಿ ಹಿಂದುಗಳ ಮೇಲೆ ನಡೆಯುತ್ತಿರುವ ನಿರಂತರ ದೌರ್ಜನ್ಯ, ಹಿಂದು ದೇವಾಲಯಗಳ ಧ್ವಂಸದಂತಹ ಕೃತ್ಯಗಳನ್ನು ಖಂಡಿಸಿ ಡಿ. 4ರಂದು ನಗರದಲ್ಲಿ ಹಿಂದು ಹಿತರಕ್ಷಣಾ ವೇದಿಕೆಯಿಂದ ಬೃಹತ್​ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

ಸಿದ್ದಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಶ್ರೀಗಳ ನೇತೃತ್ವದಲ್ಲಿ ವಿವಿಧ ಮಠಾಧೀಶರು, ಸಂಘಟನೆಗಳ ಮುಖಂಡರು ಈ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದು ಮಂಗಳವಾರ ಈ ಹೋರಾಟ ಬೆಂಬಲಿಸಿ ವಿವಿಧ ಮಠಾಧೀಶರು, ಸಂಘಸಂಸ್ಥೆಗಳ ಮುಖಂಡರು ಸುದ್ದಿಗೋಷ್ಠಿ ನಡೆಸಿ, ಪ್ರತಿಭಟನೆಯಲ್ಲಿ ಭಾಗವಹಿಸುವುದಾಗಿ ತಿಳಿಸಿದರು. ಬುಧವಾರ ಬೆಳಗ್ಗೆ 10.30ಕ್ಕೆ ನಗರದ ಬಿಜಿಎಸ್​ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ನಂತರ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಪತ್ರ ನೀಡಲಾಗುವುದು.

ಬೆಟ್ಟದಹಳ್ಳಿ ಗವಿಮಠದ ಶ್ರೀ ಚಂದ್ರಶೇಖರ ಸ್ವಾಮೀಜಿ ಮಾತನಾಡಿ, ಹಿಂಸೆಯನ್ನು ಪ್ರತಿಪಾದಿಸುತ್ತಾ ದೌರ್ಜನ್ಯ ಮಾಡುವುದನ್ನು ಯಾವ ಧರ್ಮವೂ ಒಪ್ಪುವುದಿಲ್ಲ. ಬಾಂಗ್ಲಾದಲ್ಲಿ ಹಿಂದುಗಳ ಮೇಲಿನ ಹಿಂಸಾತ್ಮಕ ಕೃತ್ಯಗಳು ಖಂಡನೀಯ. ಜಗತ್ತಿನಲ್ಲಿ ಶಾಂತಿ ಸ್ಥಾಪನೆಗೆ ಧರ್ಮಗುರುಗಳು ಸಂದೇಶ ನೀಡಬೇಕು, ಬಾಂಗ್ಲಾದಲ್ಲಿ ಹಿಂಸೆಯ ಕೃತ್ಯದಲ್ಲಿ ಭಾಗವಹಿಸಿದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಂಡು ಶಾಂತಿ ಕಾಪಾಡಬೇಕು. ಬಾಂಗ್ಲಾ ಸರ್ಕಾರ ಹಿಂದುಗಳನ್ನು, ಅವರ ಆಸ್ತಿಪಾಸ್ತಿ, ಸ್ವಾತಂತ್ರ್ಯವನ್ನು ರಕ್ಷಣೆ ಮಾಡಬೇಕು ಎಂದು ಒತ್ತಾಯಿಸಿದರು.

ಬಾಂಗ್ಲಾದಲ್ಲಿ ಹಿಂದುಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಯಾವುದೇ ನಾಗರೀಕ ಸಮಾಜ ತಲೆ ತಗ್ಗಿಸುವಂತಾದ್ದು, ಕೂಡಲೇ ಅಲ್ಲಿ ದುಷತ್ಯಗಳನ್ನು ನಿಲ್ಲಿಸಬೇಕು. ಅಲ್ಲಿನ ಹಿಂದುಗಳು ಶಾಂತಿಯಿಂದ ಬಾಳುವ ವಾತಾವರಣ ಕಲ್ಪಿಸಬೇಕು. ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಕೊಡಬೇಕು. ನಗರದಲ್ಲಿ ನಡೆಯಲಿರುವ ಹೋರಾಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಬಾಂಗ್ಲಾ ಹಿಂದುಗಳಿಗೆ ಆತ್ಮಸ್ಥೆ$ರ್ಯ ತುಂಬಬೇಕಿದೆ ಎಂದು ತಂಗನಹಳ್ಳಿ ಮಠದ ಬಸವ ಮಹಾಲಿಂಗ ಸ್ವಾಮೀಜಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಬೆಳ್ಳಾವಿ ಕಾರದ ಮಠದ ಶ್ರೀ ಕಾರದ ವೀರಬಸವ ಸ್ವಾಮೀಜಿ , ದೊಡ್ಡಗುಣಿ ಮಠದ ಶ್ರೀ ರೇವಣ್ಣಸಿದ್ಧ ಶಿವಾಚಾರ್ಯ ಸ್ವಾಮೀಜಿ, ರಾಮೇನಹಳ್ಳಿ ಮಠದ ಶ್ರೀ ಶಿವಪಂಚಾಕ್ಷರಿ ಸ್ವಾಮೀಜಿ, ಮಾಜಿ ಸಚಿವ ಸೊಗಡು ಶಿವಣ್ಣ, ನಗರ ವೀರಶೈವ ಸಮಾಜ ಸೇವಾ ಸಮಿತಿ ಅಧ್ಯಕ್ಷ ಟಿ.ಬಿ.ಶೇಖರ್​, ಕನ್ನಡ ಸೇನೆ ಜಿಲ್ಲಾಧ್ಯಕ್ಷ ಧನಿಯಾಕುಮಾರ್​ ಮತ್ತಿತರರು ಹಾಜರಿದ್ದರು.

ಬಾಂಗ್ಲಾ ವಿಮೋಚನಾ ಹೋರಾಟದಲ್ಲಿ ಭಾಗಿಯಾದವರ ಕುಟಂಬದವರಿಗೆ ಅಲ್ಲಿನ ಪ್ರಧಾನಿಯಾಗಿದ್ದ ಶೇಖ್​ ಹಸೀನಾ ಸರ್ಕಾರ ಮೀಸಲಾತಿ ನೀಡಿದ್ದನ್ನು ವಿರೋಧಿಸಿ ಶುರುವಾದ ಹೋರಾಟ, ಶೇಖ್​ ಹಸೀನಾರ ಪದಚ್ಯುತಿ ನಂತರ ಅಲ್ಪಸಂಖ್ಯಾತ ಹಿಂದುಗಳತ್ತ ತಿರುಗಿದೆ. ಪ್ರತಿನಿತ್ಯ ಹಿಂದುಗಳನ್ನು ಗುರಿಯಾಗಿಸಿಕೊಂಡು ದೌರ್ಜನ್ಯ ಮಾಡಲಾಗುತ್ತಿದೆ. ಅಲ್ಲಿನ ಮತಾಂಧರ ದೌರ್ಜನ್ಯ ಖಂಡಿಸಿ ಬಾಂಗ್ಲಾ ದೇಶದ ಸರ್ಕಾರ ಪ್ರಜಾಪ್ರಭುತ್ವ ಹಾಗೂ ರಾಜತಾಂತ್ರಿಕ ಮೌಲ್ಯಗಳ ರಕ್ಷಣೆಗೆ ತಕ್ಷಣವೇ ಕಾರ್ಯಪ್ರವೃತ್ತರಾಗಬೇಕು. ಬಿ.ಜಿ.ಪ್ರದಿಪ್​ ಕುಮಾರ್​ ಸಹ ಸಂಚಾಲಕ, ಹಿಂದು ಹಿತರಕ್ಷಣಾ ವೇದಿಕೆ