ಹುಬ್ಬಳ್ಳಿ: ಮಣಿಪುರ ಮತ್ತು ಹರಿಯಾಣ ರಾಜ್ಯಗಳಲ್ಲಿ ವ್ಯಾಪಕವಾಗಿ ನಡೆಯುತ್ತಿರುವ ದೌರ್ಜನ್ಯ ಖಂಡಿಸಿ ಹಾಗೂ ಅಲ್ಲಿನ ಕ್ರೖೆಸ್ತರಿಗೆ ಭದ್ರತೆ ನೀಡಬೇಕೆಂದು ಒತ್ತಾಯಿಸಿ, ಸರ್ವ ಧರ್ಮಗಳ ಒಕ್ಕೂಟ ವತಿಯಿಂದ ನಗರದಲ್ಲಿ ಸೋಮವಾರ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಿತು.
ಮಣಿಪುರ ಹಾಗೂ ಹರಿಯಾಣ ರಾಜ್ಯಗಳಲ್ಲಿ ಹಿಂಸಾಚಾರ ಹಾಗೂ ದೌರ್ಜನ್ಯಗಳು ಭುಗಿಲೆದ್ದಿವೆ. ಅಲ್ಲಿನ ಧಾರ್ವಿುಕ ಕಟ್ಟಡ ಹಾಗೂ ಸರ್ಕಾರಿ ಆಸ್ತಿ-ಪಾಸ್ತಿಗಳಿಗೆ ಹಾನಿಯಾಗಿದೆ. ಇಲ್ಲಿನ ಜನರು ನಿತ್ಯ ದಿನ ದೂಡುವುದು ಕಷ್ಟವಾಗಿದೆ. ಮೂಲ ಸೌಕರ್ಯದಿಂದ ಬಳಲುವಂತಾಗಿದೆ. ಮೇ 3 ನೇ ತಾರೀಖಿನಿಂದ ಈವರೆಗೆ ಸಾಕಷ್ಟು ಘಟನೆಗಳು ನಡೆದರೂ ಕೇಂದ್ರ ಸರ್ಕಾರ ಅಥವಾ ಅಲ್ಲಿನ ರಾಜ್ಯ ಸರ್ಕಾರಗಳು ಕ್ರಮಕ್ಕೆ ಮುಂದಾಗಿಲ್ಲ. ಇದರ ಬದಲು ಜಾಣ ಮೌನಕ್ಕೆ ಮುಂದಾಗಿವೆ. ಕೂಡಲೇ ಕೇಂದ್ರ ಸರ್ಕಾರವು ಅಲ್ಲಿನ ರಾಜ್ಯಗಳಲ್ಲಿ ನಡೆಯುತ್ತಿರುವ ದೌರ್ಜನ್ಯಗಳಿಗೆ ಕಡಿವಾಣ ಹಾಕಬೇಕು. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಇದಕ್ಕೂ ಮೊದಲು ನಗರದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಸ್ಟೇಷನ್ ರಸ್ತೆ, ದುರ್ಗದಬೈಲ್, ಕೊಪ್ಪಿಕರ ರಸ್ತೆ, ಸಂಗೊಳ್ಳಿ ರಾಯಣ್ಣ ವೃತ್ತದಿಂದ ಚನ್ನಮ್ಮ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಿತು. ನಂತರ ತಹಸೀಲ್ದಾರ್ ಮೂಲಕ ರಾಷ್ಟ್ರಪತಿ ಹಾಗೂ ರಾಜ್ಯಪಾಲರಿಗೆ ಮನವಿ ರವಾನಿಸಲಾಯಿತು.
ಶಾಸಕ ಪ್ರಸಾದ ಅಬ್ಬಯ್ಯ, ಪಾಲಿಕೆ ವಿರೋಧ ಪಕ್ಷದ ನಾಯಕಿ ಸುವರ್ಣ ಕಲ್ಲಕುಂಟ್ಲಾ, ಪಾಲಿಕೆ ಧೋರಜ್ ಮಣಿಕುಂಟ್ಲಾ, ವಿವಿಧ ಧರ್ಮಗಳ ಮುಖಂಡರಾದ ಸದಾನಂದ ಡಂಗಣವರ, ರಾಜಶೇಖರ ಮೆಣಸಿನಕಾಯಿ, ಸುಧಾ ಮಣಿಕುಂಟ್ಲಾ, ಗುರುನಾಥ ಉಳ್ಳಿಕಾಶಿ, ಪ್ರೇಮನಾಥ ಚಿಕ್ಕತುಂಬಳ, ಫಾದರ್ ನಿಕೋಲಸ್, ಡೆನಿಯಲ್ ಫೆನಡಮ್ ಬ್ರ್ಯಾನ್ ಡಿಸೋಜಾ, ಆಸೀಫ್ ಬಳ್ಳಾರಿ, ಸೇರಿದಂತೆ ಇತರರು ಇದ್ದರು.