ಜಿಲ್ಲೆ

ಗೃಹಸಚಿವ ಅಮಿತ್ ಷಾ ರಾಜೀನಾಮೆ ನೀಡಲಿ: ನೈಜ ಪರಿಶಿಷ್ಠ ಸಮುದಾಯಗಳ ಸಾಂವಿಧಾನಿಕ ಹಕ್ಕು ಅವಕಾಶಗಳ ಸಂರಕ್ಷಣೆ ವೇದಿಕೆ ಪ್ರತಿಭಟನೆ

ಕೆ.ಎನ್.ರಾಘವೇಂದ್ರ

ಮಂಡ್ಯ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಅಗೌರವ ತೋರಿದ ಕೇಂದ್ರ ಗೃಹ ಸಚಿವ ಅಮಿತ್ ಷಾ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ನೈಜ ಪರಿಶಿಷ್ಠ ಸಮುದಾಯಗಳ ಸಾಂವಿಧಾನಿಕ ಹಕ್ಕು ಅವಕಾಶಗಳ ಸಂರಕ್ಷಣೆ ವೇದಿಕೆ ಕಾರ್ಯಕರ್ತರು ಅಂಬೇಡ್ಕರ್ ಅವರ ಭಾವಚಿತ್ರ ಹಿಡಿದುಕೊಂಡು ನಗರದಲ್ಲಿ ಪ್ರತಿಭಟನೆ ನಡೆಸಿದರು.

ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಜಮಾವಣೆಗೊಂಡ ಕಾರ್ಯಕರ್ತರು, ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಮೆರವಣಿಗೆ ತೆರಳಿ ಡಿಸಿ ಕಚೇರಿ ಎದುರಿನ ಉದ್ಯಾನದಲ್ಲಿರುವ ಅಂಬೇಡ್ಕರ್ ಅವರ ಪ್ರತಿಮೆ ಎದುರು ಧರಣಿ ನಡೆಸಿದರು. ಲೋಕಸಭೆಯ ಚಳಿಗಾಲದ ಅಧಿವೇಶನದಲ್ಲಿ ಮಾತನಾಡಿರುವ ಅಮಿತ್ ಷಾ, ಡಾ.ಬಿ.ಆರ್.ಅಂಬೇಡ್ಕರ್ ಹೆಸರು ಫ್ಯಾಷನ್ ಆಗಿಬಿಟ್ಟಿದೆ ಎಂದು ಹೇಳಿದ್ದಾರೆ. ಅವರು ಕೂಡಲೇ ಕ್ಷಮೆಯಾಚಿಸಿ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ದೇಶದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಸಿದ್ದಾಂತವಿದ್ದರೂ ಮಳವಳ್ಳಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅವರು ರಾಜ್ಯದಲ್ಲಿ ತಾವು ಮುಖ್ಯಮಂತ್ರಿ ಸಿದ್ದಾಂತವನ್ನು ಪಾಲನೆ ಮಾಡುವುದಾಗಿ ಹೇಳಿಕೆ ನೀಡುವ ಮೂಲಕ ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿದ್ದಾರೆಂದು ದೂರಿದರು.

ಪ್ರತಿಭಟನೆಯಲ್ಲಿ ವೇದಿಕೆ ರಾಜ್ಯಾಧ್ಯಕ್ಷ ಸಿ.ಎಂ.ಕೃಷ್ಣ, ನಿವೃತ್ತ ಶಿಕ್ಷಕ ಡಾ.ಬಿ.ವಿ.ಶ್ರೀನಿವಾಸಮೂರ್ತಿ, ಯುವ ಮುಖಂಡರಾದ ಪೂರ್ಣಚಂದ್ರ, ವೆಂಕಟೇಶ್, ಆನಂದ್, ಅರ್ಪಿತಾ ಇತರರಿದ್ದರು.