ಚಾಮರಾಜನಗರ: ಕಾವೇರಿ ನೀರು ಬಿಡುವಂತೆ ಪ್ರಧಾನಿ ಮೋದಿಗೆ ಪತ್ರ ಬರೆದಿರುವ ತಮಿಳುನಾಡಿನ ಮುಖ್ಯಮಂತ್ರಿ ಸ್ಟಾಲಿನ್ ವಿರುದ್ಧ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ನಗರದ ಶ್ರೀ ಭುವನೇಶ್ವರಿ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ತಮಿಳುನಾಡು ರಾಜ್ಯ ಸರ್ಕಾರದ ವಿರುದ್ಧ ೋಷಣೆ ಕೂಗಿ, ಕೆಲಕಾಲ ರಾಷ್ಟ್ರೀಯ ಹೆದ್ದಾರಿ ತಡೆದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಚಾ.ರಂ.ಶ್ರೀನಿವಾಸ್‌ಗೌಡ ಮಾತನಾಡಿ, ಈ ಬಾರಿ ರಾಜ್ಯದಲ್ಲಿ ಉತ್ತಮ ಮಳೆ ಆಗದ ಪರಿಣಾಮ ಜಲಾಶಗಳು ಭರ್ತಿಯಾಗಿಲ್ಲ. ಮುಂದಿನ ದಿನಗಳಲ್ಲಿ ರಾಜ್ಯದಲ್ಲೇ ನೀರಿಗೆ ಆಹಾಕಾರ ಉಂಟಾಗುವ ಸಾಧ್ಯತೆ ಇದೆ. ಇಂತಹ ಪರಿಸ್ಥಿತಿ ಇದ್ದರೂ, ತಮಿಳುನಾಡಿನ ಮುಖ್ಯಮಂತ್ರಿ ಸ್ಟಾಲಿನ್ ರಾಜ್ಯದ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡಿ, ಪ್ರಧಾನಿಗಳಿಗೆ ಒತ್ತಾಯ ಮಾಡಿರುವುದು ಸರಿಯಲ್ಲ. ನಮ್ಮ ಜಲಾಶಯದ ಪರಿಸ್ಥಿತಿಗಳು ಅರ್ಥವಾಗದೇ, ಕನ್ನಡಿಗರ ಮೇಲೆ ಖ್ಯಾತೆಯನ್ನು ತೆಗೆಯುವ ಸಲುವಾಗಿ, ರಾಜಕೀಯ ಅಸ್ಥಿತ್ವವನ್ನು ಉಳಿಸಿಕೊಳ್ಳುವ ಸಲುವಾಗಿ ಇಂತಹ ನಡೆ ಅನುಸರಿಸುತ್ತಿದ್ದೀರಿ ಎಂದು ಆರೋಪಿಸಿದರು.
ಕಳೆದ ಬಾರಿ ರಾಜ್ಯದಿಂದ ನಾಲ್ಕೂಪಟ್ಟು ನೀರು ತೆಗೆದುಕೊಂಡಿದ್ದೀರಿ, ಆದರೆ ಈ ಬಾರಿ ರಾಜ್ಯದಲ್ಲೇ ವ್ಯವಸಾಯಕ್ಕೆ, ದನ-ಕರುಗಳಿಗೆ ಹಾಗೂ ಜನರಿಗೆ ಕುಡಿಯಲು ನೀರಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ತಮಿಳುನಾಡು ಒತ್ತಡಕ್ಕೆ ಒಳಗಾಗಬಾರದು. ತಮಿಳುನಾಡು ಸರ್ಕಾರ ಇದನ್ನು ಮುಂದುವರಿಸಿದ್ದೇ ಆದರೆ ತಮಿಳುನಾಡಿನ ಗಡಿಗಳನ್ನು ಬಂದ್ ಮಾಡುವ ಮೂಲಕ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ನಿಜಧ್ವನಿ ಗೋವಿಂದರಾಜು, ಪಣ್ಯದಹುಂಡಿ ರಾಜು, ಪುರುಡೋತ್ತಮ್, ಅರುಣ್ ಗೌಡ, ತಾಂಡವಮೂರ್ತಿ, ವೀರಭದ್ರ, ಮಹೇಶ್‌ಗೌಡ, ರವೀಂದ್ರಪ್ರಸಾದ್ ಕಹಳೆ ಹಾಗೂ ಇತರರು ಭಾಗವಹಿಸಿದ್ದರು