ಜಿಲ್ಲೆ

ಸಿದ್ದಾಪುರದಲ್ಲಿ ಮಹಿಳೆ ಶವವಿಟ್ಟು ಪ್ರತಿಭಟನೆ

ಸಿದ್ದಾಪುರ: ತಾಲೂಕಿನ ಹಾರ್ಸಿಕಟ್ಟಾ ಕೋಣೆಗದ್ದೆಯ ಜ್ಯೋತಿ ರವಿ ನಾಯ್ಕ ಹೆರಿಗೆಯ ನಂತರ ಆರೋಗ್ಯದಲ್ಲಾದ ಏರುಪೇರಿನಿಂದ ಮೃತಪಟ್ಟ ಘಟನೆ ಶುಕ್ರವಾರ ನಡೆದಿದ್ದು, ಇದಕ್ಕೆ ಹೆರಿಗೆ ಮಾಡಿಸಿದ ವೈದ್ಯರ ನಿರ್ಲಕ್ಷವೇ ಕಾರಣ ಎಂದು ತಾಲೂಕಾಸ್ಪತ್ರೆ ಎದುರು ಸಾರ್ವಜನಿಕರು ಶವವಿಟ್ಟು ಪ್ರತಿಭಟನೆ ನಡೆಸಿದರು.

ನ. 5ರಂದು ತಾಲೂಕಾ ಸ್ಪತ್ರೆಯ ವೈದ್ಯರು ಜ್ಯೋತಿ ಅವರಿಗೆ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಿಸಿದ್ದಾರೆ. ನಂತರ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗಕ್ಕೆ ಕಳುಹಿಸಿದ್ದರು. ಆದರೆ, ಚಿಕಿತ್ಸೆಗೆ ಸ್ಪಂದಿಸದೇ ಶುಕ್ರವಾರ ಬೆಳಗ್ಗೆ ಜ್ಯೋತಿ ಶಿವಮೊಗ್ಗ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ.

ತಾಲೂಕಾಸ್ಪತ್ರೆಯಲ್ಲಿ ಕಳೆದ 8 ದಿನಗಳಲ್ಲಿ ಇದು ಎರಡನೇ ಪ್ರಕರಣವಾಗಿದೆ. ಇದರಿಂದ ಆಕ್ರೋಶಗೊಂಡ 600ಕ್ಕೂ ಸಾರ್ವಜನಿಕರು ತಾಲೂಕಾಸ್ಪತ್ರೆಯ ಎದುರು ಶವವನ್ನಿಟ್ಟು ನ್ಯಾಯಕ್ಕಾಗಿ ಪ್ರತಿಭಟನೆ ನಡೆಸಿದರು.

ತಾಲೂಕು ಕಾಂಗ್ರೆಸ್ ಸಮಿತಿ ಅಧ್ಯಕ್ಷ ವಸಂತ ನಾಯ್ಕ ಹಾಗೂ ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷ ತಿಮ್ಮಪ್ಪ ಎಂ.ಕೆ. ವೈದ್ಯರ ನಿರ್ಲಕ್ಷದಿಂದ ಈ ಸಾವು ಸಂಭವಿಸಿದೆ. ಹಲವಾರು ಬಾರಿ ನಾವು ಪ್ರತಿಭಟನೆ ನಡೆಸಿ ಆಸ್ಪತ್ರೆಯ ವ್ಯವಸ್ಥೆಯನ್ನು ಸುಧಾರಣೆಗೊಳಿಸಲು ಮನವಿ ಮಾಡಿದ್ದೆವು. ಮೃತಪಟ್ಟ ಮಹಿಳೆಯರ ಕುಟುಂಬಗಳಿಗೆ ತಲಾ 50 ಲಕ್ಷ ರೂ.ಗಳನ್ನು ವೈದ್ಯರು ಪರಿಹಾರವಾಗಿ ನೀಡಬೇಕು. ಅವರ ಮಕ್ಕಳ ಮುಂದಿನ ಜೀವನಕ್ಕೆ ನೆರವು ಮಾಡಿಕೊಡಬೇಕು ಎಂದು ಆಗ್ರಹಿಸಿದರು.

ಸ್ಥಳಕ್ಕೆ ಭೇಟಿ ನೀಡಿದ ಶಿರಸಿಯ ಉಪವಿಭಾಗಾಧಿಕಾರಿ ಕಾವ್ಯಾರಾಣಿ ಮಾತನಾಡಿ, ವೈದ್ಯರ ವಿರುದ್ಧ ಕಾನೂನಿನಡಿ ಸೂಕ್ತ ಕ್ರಮ ಜರುಗಿಸಲಾಗುವುದು ಎಂದರು.

ಮೃತ ಮಹಿಳೆಯ ಸಾವಿಗೆ ನ್ಯಾಯಬೇಕೆಂದು ಆಗ್ರಹಿಸಿ ಆಸ್ಪತ್ರೆಯ ಮುಂಭಾಗ ಶವವನ್ನು ಇಟ್ಟು ಸಾರ್ವಜನಿಕರು ಪ್ರತಿಭಟನೆ ತಡರಾತ್ರಿಯವರೆಗೂ ನಡೆಯಿತು.

ಸ್ಥಳಕ್ಕೆ ಡಿಎಚ್​ಒ ಡಾ. ನೀರಜ್ ಬಿ.ವಿ. ಭೇಟಿ ನೀಡಿ ಮೃತ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುವುದು ಹಾಗೂ ನಿರ್ಲಕ್ಷವಹಿಸಿದ ವೈದ್ಯರನ್ನು ಅಮಾನತು ಮಾಡಲು ಮೇಲಧಿಕಾರಿಗಳಿಗೆ ಶಿಫಾರಸು ಮಾಡಲಾಗುವುದು ಎಂದು ಭರವಸೆ ನೀಡಿದರು. ಬಳಿಕವೇ ಪ್ರತಿಭಟನಾಕಾರರು ಶವವನ್ನು ಸಂಬಂಧಪಟ್ಟ ಕುಟುಂಬಕ್ಕೆ ಹಸ್ತಾಂತರಿಸಿದರು. ಈ ಕುರಿತು ಯಾವುದೇ ಪ್ರಕರಣ ದಾಖಲಾಗಿಲ್ಲ.