ಪುತ್ತೂರು: ಬಿಲ್ಲವ ಸಮಾಜದ ಹೆಣ್ಣು ಮಕ್ಕಳ ಮತ್ತು ಭಜನೆ ಸಂಕೀರ್ತನೆ ಮಾಡುವವರ ವಿರುದ್ಧ ನಾಲಿಗೆ ಹರಿ ಬಿಟ್ಟ ಅರಣ್ಯ ಅಧಿಕಾರಿ ಸಂಜೀವ ವಿರುದ್ಧ ಪುತ್ತೂರು ಉಪ ವಿಭಾಗ ಪೊಲೀಸ್ ಉಪ ಅಧೀಕ್ಷಕರ ಕಾರ್ಯಾಲಯದ ಮುಂಭಾಗ ಶುಕ್ರವಾರ ಹಿಂದು ಜಾಗರಣ ವೇದಿಕೆ ವತಿಯಿಂದ ಪ್ರತಿಭಟನೆ ನಡೆಯಿತು.
ಬಿಜೆಪಿ ಮುಖಂಡ ಮುರಳೀಕೃಷ್ಣ ಹಸಂತಡ್ಕ ಮಾತನಾಡಿ ತಾಯಂದಿರ ಹಾಗೂ ಭಜಕರ ಬಗ್ಗೆ ಅಶ್ಲೀಲ ಪದಗಳಲ್ಲಿ ಮಾತನಾಡುವವರನ್ನು ಇಲಾಖೆಯ ಮೂಲಕ ತಡೆಯಲಾಗುವುದಿಲ್ಲ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಭಯವಿಲ್ಲದಾತಗೆ ಭಯವನ್ನು ಹುಟ್ಟಿಸುವ ಕೆಲಸವನ್ನು ಹಿಂದೂ ಸಮಾಜದ ಜಾಗೃತ ಯುವಕರು ಮಾಡುವ ತಾಕತ್ತು ಇದೆ ಎಂದರು.
ಹಿಂದು ಜಾಗರಣ ವೇದಿಕೆಯ ಮಂಗಳೂರು ಗ್ರಾಮಾಂತರ ಜಿಲ್ಲಾ ಸಂಚಾಲಕ್ ನರಸಿಂಹ ಶೆಟ್ಟಿ ಮಾಣಿ ಮಾತನಾಡಿ ಜನಾಂಗೀಯ ನಿಂದನೆ ಜತೆಗೆ ಮಹಿಳೆಯರ ಮಾನ ಹರಣ ಮಾಡುವ ಪ್ರಕರಣವಾಗಿದ್ದು, ಅಽಕಾರಿ ವಿರುದ್ಧ ಇಲಾಖೆ ಕ್ರಮ ಕೈಗೊಳ್ಳದಿದ್ದಲ್ಲಿ ನಾವೇ ಕಾನೂನು ಕೈಗೆತ್ತಿಕೊಳ್ಳಬೇಕಾದೀತು ಎಂದು ಎಚ್ಚರಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಪುತ್ತೂರು ಉಪ ವಿಭಾಗ ಪೊಲೀಸ್ ಉಪ ಅಧೀಕ್ಷಕರ ಅರುಣ್ ನಾಗೇ ಗೌಡ, ಅಧಿಕಾರಿ ವಿರುದ್ಧ ಜಾಮೀನು ರಹಿತ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಇಲಾಖಾ ಅಧಿಕಾರಿಗಳ ಜತೆ ಮಾತುಕತೆ ನಡೆಸಲಾಗಿದ್ದು, ಶೀಘ್ರವೇ ಅವರನ್ನು ಬಂಧಿಸಲಾಗುವುದು ಎಂದರು.
ಹಿಂದು ಜಾಗರಣ ವೇದಿಕೆ ಮಂಗಳೂರು ಗ್ರಾಮಾಂತರ ಜಿಲ್ಲಾ ಸಹ ಸಂಚಾಲಕ್ ಸಮಿತ್ ರಾಜ್ ಧರೆಗುಡ್ಡೆ, ಸದಸ್ಯರಾದ ಪುಷ್ಪರಾಜ್ ಕಮ್ಮಾಜೆ, ಕಿರಣ್ ಮೂರ್ಜೆ, ಪುತ್ತೂರು ಜಿಲ್ಲಾ ಸಂಯೋಜಕ್ ಮೋಹನದಾಸ ರೈ ದೋಳ್ಪಾಡಿ, ಸಹ ಸಂಯೋಜಕ್ ದಿನೇಶ್ ಪಂಜಿಗ, ಭರತ್ ಈಶ್ವರಮಂಗಲ, ಪ್ರಮುಖರಾದ ಅನುಪ್ ಆಳ್ವ, ಕೀರ್ತನ್ ಸವಣೂರು, ಶಿವಪ್ರಸಾದ್ ಶಾಂತಿಗೋಡು, ವಿಟ್ಲ ತಾಲೂಕು ಸಂಚಾಲಕ ಹರ್ಷ ವಿಟ್ಲ, ಬಿಜೆಪಿ ಮುಖಂಡರಾದ ಶಿವಕುಮಾರ್, ಚಣಿಲ ತಿಮ್ಮಪ್ಪ ಶೆಟ್ಟಿ, ಜೀವಂಧರ್‌ಜೈನ್, ಸಂತೋಷ್ ಕುಮಾರ್ ರೈ ಕೈಕಾರ, ಅಶೋಕ್ ಶೆಣೈ ಭಾಮಿ, ಚಂದ್ರಶೇಖರ ಬಪ್ಪಳಿಗೆ, ರಾಜೇಶ್ ಬನ್ನೂರು, ಮನೀಷ್ ಬಿರ್ವ, ಅಜಿತ್ ರೈ ಹೊಸಮನೆ ಮತ್ತಿತರರು ಇದ್ದರು.
ಬಂಧನಕ್ಕೆ ಪಟ್ಟು ಹಿಡಿದು ಭಜನೆ!
ಅರಣ್ಯ ಅಧಿಕಾರಿ ಸಂಜೀವ ಅವರನ್ನು ಬಂಽಸುವಂತೆ ಒತ್ತಾಯಿಸಿ ಪ್ರತಿಭಟನಾಕಾರರು ಠಾಣೆ ಎದುರು ರಾಮ ಭಜನೆ ಮಾಡುವ ಮೂಲಕ ವಿನೂತನ ಶೈಲಿಯಲ್ಲಿ ಪ್ರತಿಭಟಿಸಿದರು. ಸಂಜೆ ಒಳಗಾಗಿ ಅಽಕಾರಿಯನ್ನು ಬಂಽಸುವುದಾಗಿ ಪೊಲೀಸರು ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂದಕ್ಕೆ ಪಡೆಯಲಾಯಿತು.
ಪ್ರತಿಭಟನೆ ಬೆನ್ನಲ್ಲೇ ಬಂಧನ?
ಹಿಂಜಾವೇ ಉಪ ಅಧೀಕ್ಷಕರ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದ ಬೆನ್ನಲ್ಲಿಯೇ ಅರಣ್ಯ ಅಧಿಕಾರಿ ಸಂಜೀವ ಪೂಜಾರಿ ಅವರನ್ನು ಬೆಳ್ಳಾರೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಸರ್ಕಾರಿ ಅಽಕಾರಿಯನ್ನು ಬಂಧಿಸಬೇಕಾದರೆ ಕಾನೂನಿನಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ತಜ್ಞರಲ್ಲಿ ಪೊಲೀಸರು ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಉನ್ನತ ಮಟ್ಟದ ಅಧಿಕಾರಿಗಳ ಮಾಹಿತಿಯಂತೆ ಬಂಧಿಸಿ, ನ್ಯಾಯಾಲಯಕ್ಕೆ ಹಾಜರು ಪಡಿಸುವ ಕಾರ್ಯ ಶುಕ್ರವಾರ ರಾತ್ರಿ ನಡೆಯಲಿದೆ. ಆದರೆ ಇದರ ಬಗ್ಗೆ ಸ್ಥಳೀಯ ಪೊಲೀಸರು ಮಾಹಿತಿ ನೀಡಲು ನಿರಾಕರಿಸಿದ್ದಾರೆ.
ನ್ಯಾಯಾಲಯದಿಂದ ಜಾಮೀನು!
ಅರಣ್ಯಾಧಿಕಾರಿ ಸಂಜೀವ ಪೂಜಾರಿ ಅವರ ವಿಚಾರಣೆ ನಡೆಸಿದ ಬೆಳ್ಳಾರೆ ಪೊಲೀಸರು ಬಳಿಕ ಸುಳ್ಯ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಧೀಶರು ಜಾಮೀನು ಮಂಜೂರು ಮಾಡಿದ್ದಾರೆ.