ನಂದಗುಡಿ ಹೋಬಳಿ ನೆಲವಾಗಿಲು ಶಾಲೆಯಲ್ಲಿ ಶಿಕ್ಷಕಿ ವರ್ಗಾವಣೆ ವಿರೋಧಿಸಿ ಶಾಲೆಗೆ ಬೀಗ ಹಾಕಿದ ವಿದ್ಯಾರ್ಥಿಗಳ ಪಾಲಕರು ಪ್ರತಿಭಟನೆ ನಡೆಸಿದರು. 
ಜಿಲ್ಲೆ

ಶಿಕ್ಷಕಿ ವರ್ಗಾವಣೆ, ಶಾಲೆಗೆ ಬೀಗ

ಶಿವರಾಜ.ಎಂ

ವಿಜಯವಾಣಿ ಸುದ್ದಿಜಾಲ ನಂದಗುಡಿ
ಹೋಬಳಿಯ ನೆಲವಾಗಿಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಿಢೀರ್ ಶಿಕ್ಷಕಿ ವರ್ಗಾವಣೆ ವಿರೋಧಿಸಿ ಶಾಲೆ ಕೊಠಡಿಗಳಿಗೆ ಬೀಗ ಹಾಕಿದ ವಿದ್ಯಾರ್ಥಿಗಳ ಪಾಲಕರು ಪ್ರತಿಭಟನೆ ನಡೆಸಿದರು.
ನೆಲವಾಗಿಲು ಸರ್ಕಾರಿ ಶಾಲೆಯಲ್ಲಿ 66 ವಿದ್ಯಾರ್ಥಿಗಳ ಹಾಜರಾತಿ ಇದೆ. ಆದರೆ ಇಷ್ಟು ವಿದ್ಯಾರ್ಥಿಗಳಿಗೆ ಓರ್ವ ಖಾಯಂ ಶಿಕ್ಷಕರು ಹಾಗೂ ಇಬ್ಬರು ಅತಿಥಿ ಶಿಕ್ಷಕರನ್ನು ನೇಮಿಸಲಾಗಿದೆ, ಇದರ ನಡುವೆ ಇರುವ ಖಾಯಂ ಶಿಕ್ಷಕರನ್ನು ದಿಢೀರನೇ ವರ್ಗಾವಣೆ ಮಾಡಿರುವುದರಿಂದ ಮಕ್ಕಳ ಶಿಕ್ಷಣದ ಭವಿಷ್ಯಕ್ಕೆ ತೊಂದರೆಯಾಗಲಿದೆ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು. ಇರುವ ಬೆರಳೇಣಿಗೆ ಶಿಕ್ಷಕರಲ್ಲಿ ಇಬ್ಬರು ವಯಕ್ತಿಕ ಕಾರಣಕ್ಕೆ ರಜೆ ಹಾಕಿದರೆ ಅಂದು ಶಾಲೆಗೇ ರಜೆ ನೀಡಬೇಕಾದ ಪರಿಸ್ಥಿತಿ ಎದುರಾಗುತ್ತದೆ ಇಂಥ ಸಂದರ್ಭದಲ್ಲಿ ಶಾಲೆಯ ಶಿಕ್ಷಕರನ್ನು ಬೇರೆಡೆ ವರ್ಗಾವಣೆ ಮಾಡಿರುವುದು ಎಷ್ಟು ಸರಿ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.
6 ತಿಂಗಳಿಗೇ ಎತ್ತಂಗಡಿ:
6 ತಿಂಗಳ ಹಿಂದೆಯಷ್ಟೆ ವರ್ಗಾವಣೆಯಾಗಿ ಬಂದ ಶಿಕ್ಷಕಿ ವಿಜ್ಞಾನ ಹಾಗೂ ಗಣಿತ ವಿಷಯವನ್ನು ಭೋದಿಸುತ್ತಿದ್ದರು. ಗ್ರಾಮಸ್ಥರು ಹಾಗು ಎಸ್‌ಡಿಎಂಸಿ ಸದಸ್ಯರ ಗಮನಕ್ಕೆ ತರದೆ ಬೇರೊಂದು ಜಾಗಕ್ಕೆ ವರ್ಗಾವಣೆಯಾಗಿದೆ ಇದರಿಂದ ಮಕ್ಕಳ ಪಾಠಕ್ಕೆ ಅನಾನುಕೂಲವಾಗಿದೆ ಎಂದು ವಿದ್ಯಾರ್ಥಿಗಳ ಪಾಲಕರು ಶಾಲಾ ಕೊಠಡಿಗಳಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು.
ಶಾಲೆಯಲ್ಲಿ 66 ವಿದ್ಯಾರ್ಥಿಗಳು ಓದುತ್ತಿದ್ದೇವೆ. ಪ್ರಸ್ತುತ ಮೂವರು ಶಿಕ್ಷಕರಿದ್ದಾರೆ, ಮುಖ್ಯ ಶಿಕ್ಷಕರಿಲ್ಲ. ಮುಖ್ಯವಾಗಿ ಗಣಿತ, ವಿಜ್ಞಾನ ಪಾಠ ಪ್ರವಚನ ಇಲ್ಲದಂತಾಗಿದೆ. ಬೇರೆ ಶಾಲೆಗೆ ಹೋಗಬೇಕಾದರೆ 2-3 ಕಿಲೋಮೀಟರ್ ನಡೆದು ಕೊಂಡು ಹೋಗಬೇಕಾಗಿದೆ. ಬಸ್ ಸೌಕರ್ಯ ಇಲ್ಲ. ಆದ್ದರಿಂದ ಅಧಿಕಾರಿಗಳು ತುರ್ತಾಗಿ ಶಿಕ್ಷಕರನ್ನು ನೇಮಿಸಿಬೇಕು ಎಂದು ವಿದ್ಯಾರ್ಥಿನಿ ಮೈತ್ರಿ ಆಗ್ರಹಿಸಿದರು.
ಗ್ರಾಮೀಣ ಭಾಗದ ಬಡ ಕುಟುಂಬದಿಂದ ಬಂದವರಾಗಿದ್ದು, ನಮ್ಮ ಪಾಲಕರು ಕೂಲಿ ಮಾಡಿ ನನ್ನನ್ನು ಶಾಲೆಗೆ ಕಳುಹಿಸುತ್ತಿದ್ದಾರೆ. ನಾನು ವಿದ್ಯಾವಂತನಾಗಿ ಒಳ್ಳೆ ಪ್ರಜೆಯಾಗಬೇಕೆಂಬ ಛಲ ಇದೆ. ನಾನು ಓದುವ ಶಾಲೆಯಲ್ಲಿ ಶಿಕ್ಷಕರ ಕೊರತೆ ಇದೆ. ಅಧಿಕಾರಿಗಳು ಶಿಕ್ಷಕರ ಕೊರತೆಯನ್ನು ನಿವಾರಿಸಬೇಕು ಎಂದು 7 ನೇ ತರಗತಿ ವಿದ್ಯಾರ್ಥಿ ತೇಜಸ್ ಅಲವತ್ತುಗೊಂಡನು.