ಶ್ರೀನಿವಾಸಪುರ: ಸರ್ಕಾರಿ ಗೋಮಾಳ, ಕೆರೆ-ಕುಂಟೆ ಜಮೀನುಗಳು ನಾಪತ್ತೆಯಾಗಿವೆ. ಹಳ್ಳಿಗಳಲ್ಲಿ ಸರ್ಕಾರಿ ಜಮೀನುಗಳನ್ನು ಉಳಿಸಬೇಕು ಮತ್ತು ಕೃಷಿ ಆದಾರಿತ ಕೈಗಾರಿಕೆ ತೆರೆದು ತರಕಾರಿಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಬೇಕೆಂದು ತಾಲೂಕು ಕಚೇರಿ ಮುಂದೆ ಅಧಿಕಾರಿಗಳಿಗೆ ಹಾಗೂ ಸಾರ್ವಜನಿಕರಿಗೆ ಉಚಿತ ತರಕಾರಿ ವಿತರಣೆ ಮಾಡುವ ಮೂಲಕ ಹಸಿರು ಸೇನೆ ಮತ್ತು ರೈತ ಸಂಘದಿಂದ ಬುಧವಾರ ವಿನೂತನ ಮಾದರಿಯಲ್ಲಿ ಪ್ರತಿಭಟನೆ ನಡೆಸಲಾಯಿತು.
ಹಸಿರು ಸೇನೆ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, ರೈತರ ಹೆಸರು ಹೇಳಿಕೊಂಡು ರಾಜಕಾರಣ ಮಾಡುವ ಸರ್ಕಾರ, ವೈಜ್ಞಾನಿಕ ಬೆಲೆ ನಿಗದಿ ಮಾಡದೆ ರೈತನ ಬೆನ್ನೆಲುಬು ಮುರಿದಿದ್ದಾರೆ. ಕಂದಾಯ, ಕೃಷಿ, ತೋಟಗಾರಿಕೆ, ರೇಷ್ಮೆ, ಗ್ರಾಪಂಗಳಲ್ಲಿ ರೈತರ ಬಳಿ ಲಂಚ ಪಡೆಯದೆ ಕೆಲಸ ಮಾಡುತ್ತೇವೆಂದು ಹಾಗೂ ನಾವು ಲಂಚ ಪಡೆಯುವುದಿಲ್ಲ ಎಂದು ಕಚೇರಿಗಳ ಮುಂದೆ ನಾಮಪಲಕ ಹಾಕಬೇಕು ಎಂದು ಒತ್ತಾಯಿಸಿದರು.
ಬೀಜ, ಗೊಬ್ಬರ ಹಾಗೂ ಔಷಧಗಳಿಗೆ ರಸೀದಿ ನೀಡದ ಹಾಗೂ ಅಧಿಕ ಬೆಲೆಗೆ ಮಾರುವ ಅಂಗಡಿಯ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಆಗ್ರಹಿಸಿದರು.
ಕೃಷಿ ಇಲಾಖೆಗೆ ಬರುವ ಕಾಂಪೋಸ್ಟ್ ಹಾಗೂ ಜೈವಿಕ ಗೊಬ್ಬರಗಳ ಕಳಪೆ ಗುಣಮಟ್ಟ ಮತ್ತು ಕೃಷಿ, ತೋಟಗಾರಿಕೆ, ರೇಷ್ಮೆ ಇಲಾಖೆಯಲ್ಲಿ ನೀಡುವ ಹನಿ ನೀರಾವರಿ, ಯಂತ್ರೋಪಕರಣ ಅತ್ಯಂತ ಕಳಪೆಯಾಗಿದ್ದು, ಇವುಗಳಿಗೆ ಕೊಡುವ ಸಹಾಯದನವನ್ನು ರೈತರಿಗೆ ನೀಡಿದರೆ ಗುಣಮಟ್ಟದ ಯಂತ್ರ ಖರೀದಿಸಲು ಸಾಧ್ಯವಾಗುತ್ತದೆ. ರೈತನಿಗೂ ಶೇ.50 ಉಳಿತಾಯವಾಗುತ್ತದೆ ಎಂದರು.
ಜಿಲ್ಲಾಧ್ಯಕ್ಷ ಮರಗಲ್ ಶ್ರೀನಿವಾಸ್ ಮಾತನಾಡಿ, ದೇಶದಲ್ಲೇ ಅತಿ ಹೆಚ್ಚು ಬಂಡವಾಳ ಹೂಡುವ ಉದ್ದಿಮೆ ಕೃಷಿ ರಂಗವಾಗಿದೆ. ಆದರೆ ನಮ್ಮನ್ನಾಳುವ ರಾಜಕಾರಣಿಗಳು ರೈತನ ಹೆಸರಿನಲ್ಲಿ ರಾಜಕಾರಣ ಮಾಡುತ್ತಿರುವುದು ನಾಚಿಕೆಗೇಡು. ಕಂದಾಯ ಮತ್ತು ಸರ್ವೇ ಇಲಾಖೆ ಹೆಜ್ಜೆ ಹೆಜ್ಜೆಗೂ ಲಂಚದ ರೂಪದಲ್ಲಿ ರೈತನ ರಕ್ತ ಹೀರುತ್ತಿದ್ದು, ಇದಕ್ಕೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ತಹಸೀಲ್ದಾರ್ ಕೆ.ಎಸ್.ಸುಜಾತಾ, ತಾಲೂಕಿನಲ್ಲಿರುವ ಸಮಸ್ಯೆಗಳನ್ನು ಪರಿಹರಿಸಲಾಗುವುದು. ಗೋಮಾಳ ಜಮೀನನ್ನು ಹಳ್ಳಿಗಳಲ್ಲಿ ಮೀಸಲಿಡಲು ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದು ಭರವಸೆ ನೀಡಿದರು.
ಜಿಲ್ಲಾ ಸಂಚಾಲಕ ಕೆ.ಶ್ರೀನಿವಾಸಗೌಡ, ರಾಜ್ಯ ಸಂಚಾಲಕ ಬಂಗವಾದಿ ನಾಗರಾಜ್‌ಗೌಡ, ಜಿಲ್ಲಾಧ್ಯಕ್ಷೆ ನಳಿನಿ, ತಾ.ಅಧ್ಯಕ್ಷ ತೆರ‌್ನಹಳ್ಳಿ ಆಂಜಿನಪ್ಪ, ತೆರ‌್ನಹಳ್ಳಿ ವೆಂಕಿ, ಆಚಂಪಲ್ಲಿ ಗಂಗಾದರ್, ವಕ್ಕಲೇರಿ ಹನುಮಯ್ಯ, ಸಹದೇವಣ್ಣ, ಎಂ.ಹೊಸಹಳ್ಳಿ ಚಂದ್ರಪ್ಪ ಮತ್ತಿತರರು ಇದ್ದರು.