ತಲಪಾಡಿ ಟೋಲ್ ಬೂತ್‌ನಲ್ಲಿ ಉಂಟಾಗಿರುವ ವಿವಿಧ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಂತೆ ರಾಷ್ಟ್ರೀಯ ಹೆದ್ದಾರಿ (ಎನ್‌ಎಚ್‌ಎಐ) ಯೋಜನಾ ನಿರ್ದೇಶಕರ ಮಂಗಳೂರು ಕಚೇರಿಗೆ ನೇತಾರರು ಮನವಿ ಸಲ್ಲಿಸಿದರು. 
ಜಿಲ್ಲೆ

ಸ್ಥಳೀಯರ ಸಮಸ್ಯೆ ಪರಿಹಾರಕ್ಕೆ ಮನವಿ: ತಲಪಾಡಿ ಟೋಲ್‌ಗೇಟ್ ವಿರುದ್ಧ ಪ್ರತಿಭಟನೆ

ಸೌಮ್ಯ ಆರ್

ಮಂಜೇಶ್ವರ: ತಲಪಾಡಿ ಟೋಲ್ ಗೇಟಿನಲ್ಲಿ ಸ್ಥಳೀಯರಿಗಾಗುತ್ತಿರುವ ಸಮಸ್ಯೆ ಪರಿಹರಿಸಲು ಹೆದ್ದಾರಿ ಇಲಾಖೆ ತಕ್ಷಣವೇ ಮುಂದಾಗದಿದ್ದಲ್ಲಿ ಪ್ರತಿಭಟನೆ ನಡೆಸಬೇಕಾದೀತು ಎಂದು ಎಸ್‌ಡಿಪಿಐ ಎಚ್ಚರಿಸಿದೆ.

ಕೋವಿಡ್‌ಗೆ ಮುಂಚೆ ಪ್ರಮುಖ ರಾಜಕೀಯ ಪಕ್ಷಗಳು ಹಾಗೂ ಟೋಲ್ ಗೇಟ್ ಹೋರಾಟ ಸಮಿತಿ ಹೆಸರಿನಲ್ಲಿ ಸಮಿತಿ ರಚಿಸಿ ಸ್ಥಳೀಯರ ಸಂಕಷ್ಟದ ಬಗ್ಗೆ ಧ್ವನಿ ಎತ್ತಿದ್ದರೂ ಕೋವಿಡ್ ಬಳಿಕ ಇತ್ತ ಯಾರೂ ತಿರುಗಿ ನೋಡಿರಲಿಲ್ಲ. ಕೋವಿಡ್‌ಗೆ ಮುಂಚೆ 5 ಕಿ.ಮೀ ವ್ಯಾಪ್ತಿಯಲ್ಲಿ ವಾಸಿಸುವ ಕೇರಳ ಹಾಗೂ ಕರ್ನಾಟಕದ ಜನರಿಗೆ ಟೋಲ್ ಗೇಟಿನಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶವಿತ್ತು. ಆದರೆ ಕೋವಿಡ್ ಬಳಿಕ ಗೇಟಿನಲ್ಲಿ ಮಂಜೇಶ್ವರದವರಿಗೆ ಉಚಿತ ಪ್ರಯಾಣ ನಿರಾಕರಿಸಿ ತಲಪಾಡಿಯವರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.

ಈ ಬಗ್ಗೆ ಮಂಜೇಶ್ವರದ ಯಾವುದೇ ಜನಪ್ರತಿನಿಧಿಗಳು ಆಕ್ಷೇಪ ವ್ಯಕ್ತಪಡಿಸಿರಲಿಲ್ಲ. ಪರಿಣಾಮ, ಮಂಜೇಶ್ವರ ನಿವಾಸಿಗಳು ಟೋಲ್‌ಗೇಟ್‌ನಲ್ಲಿ ಪ್ರಶ್ನಿಸಿದರೆ ಸಿಬ್ಬಂದಿ ಗೂಂಡಾಗಿರಿ ವರ್ತನೆ ತೋರುತ್ತಿದ್ದರು. ಇದು ಸ್ಥಳೀಯರಲ್ಲಿ ಆತಂಕ ಮೂಡಿಸಿತ್ತು.

ಇದನ್ನು ಮನಗಂಡ ಎಸ್‌ಡಿಪಿಐ ಟೋಲ್‌ಗೇಟ್‌ನ ಐದು ಕಿಮಿ ವ್ಯಾಪ್ತಿಯ ವಾಹನಗಳಿಗೆ ಉಚಿತ ಪಾಸ್ ನೀಡುವಂತೆ ರಾಷ್ಟ್ರೀಯ ಹೆದ್ದಾರಿ ಯೋಜನಾ ನಿರ್ದೇಶಕರಿಗೆ ಮನವಿ ಸಲ್ಲಿಸಿದೆ. ಬೇಡಿಕೆಗೆ ಸ್ಪಂದನೆ ಸಿಗದಿದ್ದಲ್ಲಿ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದೆ.