ದಡ್ಡಲಕಾಡು ಸರ್ಕಾರಿ ಆಂಗ್ಲಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಬಿ.ಸಿ.ರೋಡ್‌ನ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು. 
ಜಿಲ್ಲೆ

ಶಿಕ್ಷಣಾಧಿಕಾರಿ ಕಚೇರಿಗೆ ವಿದ್ಯಾರ್ಥಿಗಳ ಮುತ್ತಿಗೆ : ದಡ್ಡಲಕಾಡು ಪ್ರೌಢಶಾಲೆ ಮುಖ್ಯಶಿಕ್ಷಕ ವರ್ಗಾವಣೆ ಹಿನ್ನೆಲೆ : ಎಸ್‌ಡಿಎಂಸಿ, ಶಿಕ್ಷಕಿ ವಿರುದ್ಧ ಆಕ್ರೋಶ

ಸೌಮ್ಯ ಆರ್

ವಿಜಯವಾಣಿ ಸುದ್ದಿಜಾಲ ಬಂಟ್ವಾಳ

ಸುಳ್ಳು ಆರೋಪ ಹೊರಿಸಿ ದಡ್ಡಲಕಾಡು ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯಶಿಕ್ಷಕ ರಮಾನಂದ ಅವರನ್ನು ಮತ್ತೊಂದು ಶಾಲೆಗೆ ಶಿಕ್ಷಣ ಇಲಾಖೆ ನಿಯೋಜಿಸಿದೆ ಎಂದು ಆರೋಪಿಸಿ ದಡ್ಡಲಕಾಡು ಪ್ರೌಢಶಾಲೆ ವಿದ್ಯಾರ್ಥಿಗಳು ಹಾಗೂ ಪಾಲಕರು ಗುರುವಾರ ಬಿ.ಸಿ.ರೋಡಿನ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ದಿಢೀರ್ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಎಲ್ಲ ಶಾಲೆಗಳಲ್ಲಿ ವಿದ್ಯಾರ್ಥಿಗಳು ಎಫ್1 ಪರೀಕ್ಷೆಗೆ ಸಿದ್ಧಗೊಳ್ಳುತ್ತಿದ್ದರೆ ದಡ್ಡಲಕಾಡು ಶಾಲೆಯಲ್ಲಿ ಪಾಠಗಳು ಸರಿಯಾಗಿ ನಡೆದಿಲ್ಲ. ಈ ನಡುವೆ ಮುಖ್ಯ ಶಿಕ್ಷಕರ ವಿರುದ್ಧ ಸುಳ್ಳು ಆರೋಪ ಹೊರಿಸಿ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಒತ್ತಡ ತಂದು ಅವರನ್ನು ಬೇರೆ ಶಾಲೆಗೆ ಕರ್ತವ್ಯಕ್ಕೆ ನಿಯೋಜಸಲಾಗಿದೆ. ಇದರಿಂದಾಗಿ ಶಿಕ್ಷಕರ ಕೊರತೆ ಎದುರಾಗಿದ್ದು, ವಿದ್ಯಾರ್ಥಿಗಳ ಭವಿಷ್ಯ ಡೋಲಾಯಮಾನವಾಗಿದೆ. ಎಸ್‌ಡಿಎಂಸಿ ಹಾಗೂ ದತ್ತು ಸಮಿತಿ ವಿದ್ಯಾರ್ಥಿಗಳ ಭವಿಷ್ಯದಲ್ಲಿ ಚೆಲ್ಲಾಟವಾಡುತ್ತಿದ್ದು, ತಕ್ಷಣ ಮುಖ್ಯ ಶಿಕ್ಷಕ ರಮಾನಂದ ಅವರನ್ನು ಮತ್ತೆ ಶಾಲೆಯಲ್ಲಿ ಕರ್ತವ್ಯದಲ್ಲಿ ಮುಂದುವರಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥನ್ ಎಂ.ಜಿ. ಪ್ರತಿಭಟನಾ ನಿರತರ ಜತೆ ಮಾತುಕತೆ ನಡೆಸಿ, ಶಿಕ್ಷಕ ರಮಾನಂದ ಅವರ ಮನವಿಯ ಮೇರೆಗೆ ಅವರನ್ನು ಬೇರೆ ಶಾಲೆಯಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಅವರ ಮೇಲಿರುವ ಆರೋಪದ ಬಗ್ಗೆ ಇಲಾಖಾ ತನಿಖೆ ನಡೆಯುತ್ತಿದ್ದು, ಈಗಾಗಲೇ ಉಪನಿರ್ದೇಶಕರು ಹಾಗೂ ಅಧಿಕಾರಿಗಳ ತಂಡ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಜುಲೈ 18ರಂದು ಮತ್ತೆ ಶಾಲೆಯಲ್ಲಿ ವಿದ್ಯಾರ್ಥಿಗಳ ಹಾಗೂ ಪಾಲಕರ ಸಭೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆಯಿತ್ತರು. ಇದಕ್ಕೆ ಒಪ್ಪದ ವಿದ್ಯಾರ್ಥಿಗಳು ಈ ದಿನವೇ ರಮಾನಂದ ಅವರನ್ನು ಶಾಲೆಗೆ ಕರೆಸಬೇಕು ಎಂದು ಪಟ್ಟು ಹಿಡಿದರು.

ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ರಾಘವೇಂದ್ರ ಬಳ್ಳಾಲ್, ದೈಹಿಕ ಪರಿವೀಕ್ಷಣಾಧಿಕಾರಿ ವಿಷ್ಣು ನಾರಾಯಣ ಹೆಬ್ಬಾರ್, ಶಿಕ್ಷಣ ಸಂಯೋಜಕಿ ಸುಜಾತಾ ಕುಮಾರಿ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಮಾತುಕತೆ ನಡೆಸಿದರು.

ದತ್ತು ಸಂಸ್ಥೆ, ಎಸ್‌ಡಿಎಂಸಿ ಕಿರುಕುಳ

ಪಾಲಕ ಸುಕುಮಾರ್ ಬಂಟ್ವಾಳ ಮಾತನಾಡಿ, ದತ್ತು ಸಂಸ್ಥೆ ಹಾಗೂ ಎಸ್‌ಡಿಎಂಸಿಯ ಮಾನಸಿಕ ಕಿರುಕುಳದಿಂದಾಗಿ ರಮಾನಂದ ಅವರು ವರ್ಗಾವಣೆಗೆ ಬೇಡಿಕೆಯಿಟ್ಟಿದ್ದಾರೆ. ಪ್ರೌಢಶಾಲೆಯಲ್ಲಿ ಇಬ್ಬರು ಶಿಕ್ಷಕರು ಮಾತ್ರ ಇರುವಾಗ ಮುಖ್ಯ ಶಿಕ್ಷಕರನ್ನು ಹೇಗೆ ಬೇರೆ ಶಾಲೆಗೆ ನಿಯೋಜನೆ ಮಾಡಿದ್ದೀರಿ? ಮುಖ್ಯ ಶಿಕ್ಷಕರ ಮೇಲಿನ ಆರೋಪ ಸಾಬೀತಾಗದೆ ನಿಯೋಜನೆ ಮಾಡುವ ಅವಕಾಶ ಇದೆಯಾ? ದೌರ್ಜನ್ಯಕ್ಕೆ ಒಳಗಾದ ಶಿಕ್ಷಕಿ ಯಾರು? ಮುಖ್ಯ ಶಿಕ್ಷಕರಿಂದ ಅವರಿಗಾಗಿರುವ ದೌರ್ಜನ್ಯ ಏನು? ದೂರಿನ ಬಗ್ಗೆ ಪಾಲಕರು ಅಥವಾ ವಿದ್ಯಾರ್ಥಿಗಳನ್ನು ವಿಚಾರಣೆ ಮಾಡಿದ್ದೀರಾ? ಪಾಠಗಳು ನಡೆಯದೆ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಶಾಲೆ ಬಿಟ್ಟು ಬೇರೆ ಶಾಲೆಗೆ ಹೋಗುತ್ತಿದ್ದಾರೆ. ವಿದ್ಯಾರ್ಥಿಗಳಿಗಾಗುತ್ತಿರುವ ಈ ಅನ್ಯಾಯಕ್ಕೆ ಯಾರು ಹೊಣೆ? ನಿಯಮಾನುಸಾರವಾಗಿ ರಚನೆಯಾಗದ ಎಸ್‌ಡಿಎಂಸಿಯನ್ನು ಪಾಲಕರ ಸಮ್ಮುಖ ಮರುರಚಿಸಬೇಕು ಎಂದರು.

ಕುಸಿದು ಬಿದ್ದ ಬಿಇಒ

ಪ್ರತಿಭಟನಾಕಾರರ ಜತೆ ಮಾತುಕತೆ ನಡೆಸುತ್ತಿದ್ದ ವೇಳೆ ಶಿಕ್ಷಣಾಧಿಕಾರಿ ಮಂಜುನಾಥನ್ ಎಂ.ಜಿ ಅಧಿಕ ರಕ್ತದೊತ್ತಡಕ್ಕೆ ಒಳಗಾಗಿ ಕುಸಿದು ಬಿದ್ದರು. ತಕ್ಷಣ ಇಲಾಖಾಧಿಕಾರಿಗಳು ಅವರನ್ನು ಉಪಚರಿಸಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ದರು.

ಶಿಕ್ಷಕಿಯಿಂದ ವಿದ್ಯಾಲಯಕ್ಕೆ ದುರ್ಗತಿ

ಪ್ರಾಥಮಿಕ ಶಾಲಾ ಸಹಶಿಕ್ಷಕಿ ಹಿಲ್ಡಾ ಫರ್ನಾಂಡಿಸ್ ಅವರಿಂದಲೇ ಶಾಲೆಗೆ ಈ ದುರ್ಗತಿ ಬಂದಿದ್ದು, ಅವರನ್ನು ಶಾಲೆಯಿಂದ ವರ್ಗಾವಣೆಗೊಳಿಸುವಂತೆ ವಿದ್ಯಾರ್ಥಿಗಳು ಹಾಗೂ ಪಾಲಕರು ಆಗ್ರಹಿಸಿದರು. ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿದ್ದರೂ ಪ್ರೌಢಶಾಲಾ ವಿದ್ಯಾರ್ಥಿಗಳನ್ನು ಅವರು ನಿಯಂತ್ರಿಸುತ್ತಿದ್ದು, ಅವರ ವೈಯಕ್ತಿಕ ದ್ವೇಷದಿಂದ ವಿದ್ಯಾರ್ಥಿಗಳು ಬೀದಿಗಿಳಿಯುವ ಪರಿಸ್ಥಿತಿ ಬಂದಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.