ದೇವನಹಳ್ಳಿಯ ಜಿಲ್ಲಾಡಳಿತಭವನದ ಆವರಣದಲ್ಲಿ ಪ್ರತಿಭಟನೆ 
ಜಿಲ್ಲೆ

ಸಂಸದ ಪ್ರಜ್ವಲ್‌ರೇವಣ್ಣ ಬಂಧನಕ್ಕೆ ಪಟ್ಟು

ಶಿವರಾಜ.ಎಂ

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅಸಹಾಯಕ ಮಹಿಳೆಯರ ಮೇಲೆ ನಡೆಸಿದ್ದಾರೆ ಎನ್ನಲಾದ ಲೈಂಗಿಕ ದೌರ್ಜನ್ಯ ಹೇಯ ಕೃತ್ಯವಾಗಿದ್ದು, ಈ ಕೂಡಲೇ ಈ ಪ್ರಕರಣದ ಎಲ್ಲ ಆರೋಪಿಗಳನ್ನು ಬಂಧಿಸಿ ಸಂತ್ರಸ್ತರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಪ್ರಜಾ ವಿಮೋಚನಾ ಚಳವಳಿ (ಸ್ವಾಭಿಮಾನ) ಅಧ್ಯಕ್ಷ ಮುನಿ ಆಂಜಿನಪ್ಪ ಒತ್ತಾಯಿಸಿದರು.
ದೇವನಹಳ್ಳಿಯ ಜಿಲ್ಲಾಡಳಿತಭವನದ ಆವರಣದಲ್ಲಿ ಪ್ರತಿಭಟನೆಯಲ್ಲಿ ಮಾತನಾಡಿದರು. ಪೊಲೀಸರು ತಪ್ಪಿತಸ್ಥರನ್ನು ಬಂಧಿಸಿ ಸಂತ್ರಸ್ತರಿಗೆ ನ್ಯಾಯ ಒದಗಿಸಬೇಕು. ಇಡೀ ದೇಶವೇ ತಲೆ ತಗ್ಗಿಸುವಂತಹ ಈ ಪ್ರಕರಣದ ಬಗ್ಗೆ ಸಮಗ್ರ ತನಿಖೆಯಾಗಿ ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು. ಪೊಲೀಸರು ಯಾವುದೇ ಒತ್ತಡಕ್ಕೆ ಒಳಗಾಗದೆ ಕರ್ತವ್ಯ ನಿರ್ವಹಿಸಬೇಕು ಎಂದು ಮನವಿ ಮಾಡಿದರು.
ಪ್ರಕರಣ ಸಂಬಂಧ ಮಾಜಿ ಸಚಿವ ಎಚ್.ಡಿ.ರೇವಣ್ಣ ಇದೊಂದು ಹಳೇ ಪ್ರಕರಣ ಎಂಬಂತಹ ಹೇಳಿಕೆ ನೀಡಿರುವುದು ಅಕ್ಷಮ್ಯ. ಇಷ್ಟು ವರ್ಷ ಪ್ರಕರಣ ಮುಚ್ಚಿಟ್ಟಿರುವ ಆರೋಪದಡಿ ಇವರ ವಿರುದ್ಧ ಮತ್ತೊಂದು ಕೇಸ್ ದಾಖಲಿಸಬೇಕು ಎಂದು ಒತ್ತಾಯಿಸಿದರು.
ಅಧಿಕಾರ, ಹಣ ಬಲದಿಂದ ಅಸಹಾಯಕ ಮಹಿಳೆಯರನ್ನು ಬೆದರಿಸಿ ಲೈಂಗಿಕ ಶೋಷಣೆ ನಡೆಸಿರುವುದು ಪ್ರಜ್ಞಾವಂತ ಸಮಾಜ ತಲೆ ತಗ್ಗಿಸುವಂತೆ ಮಾಡಿದೆ ಎಂದು ಹೇಳಿದರು.

ಬಂಧಿಸದಿರುವುದು ಅನುಮಾನಕ್ಕೆ ಕಾರಣ ಶಾಸಕ ರೇವಣ್ಣ ಮತ್ತು ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಮನೆ ಕೆಲಸದ ಮಹಿಳೆಯರು ಹೊಳೆನರಸೀಪುರ ಠಾಣೆಗೆ ಲೈಂಗಿಕ ದೌರ್ಜನ್ಯದ ದೂರು ದಾಖಲಿಸಿದ್ದಾರೆ. ಆದರೂ ಆರೋಪಿಗಳನ್ನು ಬಂಧಿಸದಿರುವುದು ಅನುಮಾನಕ್ಕೆ ಕಾರಣವಾಗಿದೆ ಎಂದು ಪ್ರಜಾ ವಿಮೋಚನಾ ಚಳುವಳಿ ಬೆಂಗಳೂರು ನಗರ ಅಧ್ಯಕ್ಷ ಅಯೂಬ್ ಖಾನ್ ಹೇಳಿದರು. ಕೇಂದ್ರ ಸರ್ಕಾರಕ್ಕೆ ಈ ಬಗ್ಗೆ ಮಾಹಿತಿ ಇದ್ದರೂ ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹೋಗಿ ತಲೆಮರೆಸಿಕೊಳ್ಳಲು ಸಹಕಾರ ನೀಡಿರುವುದು ಖಂಡನೀಯ. ವಿದೇಶಕ್ಕೆ ಪರಾರಿಯಾಗಿರುವ ಹಾಸನದ ಬಿಜೆಪಿ ಬೆಂಬಲಿತ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಪ್ರಜ್ವಲ್ ಅವರನ್ನು ಎಸ್‌ಐಟಿ ಅಧಿಕಾರಿಗಳು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದರು. ಆರೋಪಿಗಳನ್ನು ಶೀಘ್ರ ಬಂಧಿಸದಿದ್ದಲ್ಲಿ ರಾಜ್ಯಾದ್ಯಂತ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.