ವಿಜಯವಾಣಿ ಸುದ್ದಿಜಾಲ ದಾಬಸ್‌ಪೇಟೆ
ಪಟ್ಟಣದಲ್ಲಿ ನಾಲ್ಕೈದು ವರ್ಷದಿಂದ ಕಾರ್ಯನಿರ್ವಹಿಸುತ್ತಿದ್ದ ವಿಶೇಷ ಭೂಸ್ವಾಧೀನಧಿಕಾರಿ ಹಾಗೂ ಸಕ್ಷಮ ಪ್ರಾಧಿಕಾರ ಕಚೇರಿಯನ್ನು ದಿಢೀರ್ ಸ್ಥಳಾಂತರ ಮಾಡುತ್ತಿರುವುದು ವಿರೋಧಿಸಿ ಸೋಮವಾರ ಹಲವು ರೈತರು ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದರು.
ಸೋಂಪುರ ಹೋಬಳಿಯ ರೈತರು ಭೂಸ್ವಾಧೀನ ಪ್ರಕ್ರಿಯೆ ಸಂಬಂಧಪಟ್ಟ ಕಡತಗಳನ್ನು ಇದೇ ಕಚೇರಿಗೆ ನೀಡಿದ್ದಾರೆ. ಹೀಗೆ ಏಕಾಏಕಿ ಕಚೇರಿ ಬಂದ್ ಮಾಡಿ ಬೇರೆ ಕಡೆ ಸ್ಥಳಾಂತರ ಮಾಡುತ್ತಿರುವುದು ಏಕೆ ಎಂದು ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು.
ಸೋಂಪುರ, ತ್ಯಾಮಗೊಂಡ್ಲು ಹೋಬಳಿ ರೈತರು ಭೂಸ್ವಾಧೀನಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ದಾಬಸ್‌ಪೇಟೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಚೇರಿಗೆ ನೀಡಿದ್ದರು. ಈಗ ರೈತರಿಗೆ ಯಾವುದೇ ಮಾಹಿತಿ ನೀಡದೆ ಸ್ಥಳಾಂತರ ಮಾಡುತ್ತಿರುವುದು ಅನುಮಾನಕ್ಕೆ ಕಾರಣವಾಗಿದೆ ಎಂದು ರೈತರು ದೂರಿದರು.
ಗ್ರಾಮ ಪಂಚಾಯತಿ ಸದಸ್ಯ ಆರ್.ಶಿವಕುಮಾರ ಮಾತನಾಡಿ ಇದೇ ಕಚೇರಿಯಲ್ಲಿ ಮೂರು ಹೋಬಳಿಯ ಭೂಸ್ವಾಧೀನಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ನೀಡುತ್ತಿದ್ದಾರೆ. ಆದರೆ ಅಧಿಕಾರಿಗಳು ಯಾವುದೇ ಮಾಹಿತಿ ನೀಡದೆ ಸ್ಥಳಾಂತರ ಮಾಡುತ್ತಿದ್ದಾರೆ ಈ ಬಗ್ಗೆ ಮೇಲಾಧಿಕಾರಿ ಗಮನಕ್ಕೆ ತರಲಾಗುವುದು ಎಂದು ಗ್ರಾಪಂ ಸದಸ್ಯ ಆರ್.ಶಿವಕುಮಾರ್ ತಿಳಿಸಿದರು. ಕಚೇರಿ ಇಲ್ಲಿ ಕಾರ್ಯನಿರ್ವಹಿಸುತ್ತಿದ್ದರಿಂದ ಈ ಭಾಗದ ರೈತರ ಸಂಪರ್ಕಕ್ಕೆ ಸಹಕಾರಿಯಾಗಿತ್ತು. ಈಗ ಏಕಾಏಕಿ ಬದಲಾವಣೆ ಮಾಡುತ್ತಿರುವುದರಿಂದ ತೊಂದರೆ ಎದುರಾಗಲಿದೆ ಎಂದು ರೈತ ಪಂಚಾಕ್ಷರಿ ಆಕ್ಷೇಪ ವ್ಯಕ್ತಪಡಿಸಿದರು.