ಗುಂಡ್ಲುಪೇಟೆ : ವಿವಿಧ ಇಲಾಖೆಗಳ ಅಧಿಕಾರಿಗಳ ಅನುಪಸ್ಥಿತಿ ಬಗ್ಗೆ ರೊಚ್ಚಿಗೆದ್ದ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಎಸ್ಸಿ, ಎಸ್ಟಿ ಹಿತರಕ್ಷಣಾ ಸಮಿತಿ ಸಭೆಯನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.
ಬುಧವಾರ ಪಟ್ಟಣದ ತಾಲೂಕು ಕಚೇರಿಯ ಸಭಾಂಗಣದಲ್ಲಿ ತಹಸೀಲ್ದಾರ್ ರಮೇಶ್ ಬಾಬು ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡಿದ್ದ ಎಸ್ಸಿ, ಎಸ್ಟಿ ಹಿತರಕ್ಷಣಾ ಸಮಿತಿ ಸಭೆ ಕರೆಯಲಾಗಿತ್ತು. ತಾಪಂ ಇಒ ರಾಮಲಿಂಗಯ್ಯ, ಸಮಾಜಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ನಂಜುಂಡೇಗೌಡ, ಪುರಸಭೆ ಮುಖ್ಯಾಧಿಕಾರಿ ವಸಂತ ಕುಮಾರಿ ಹೊರತುಪಡಿಸಿ ಸಭೆಗೆ ವಿವಿಧ ಇಲಾಖೆಗಳ ಕಲವೇ ಅಧಿಕಾರಿಗಳು ಹಾಜರಾಗಿದ್ದರು.ಇದನ್ನು ಖಂಡಿಸಿ ಕರವೇ ತಾಲೂಕು ಅಧ್ಯಕ್ಷ ಸುರೇಶ್ ನಾಯ್ಕ ಆಕ್ರೋಶ ವ್ಯಕ್ತಪಡಿಸಿ ಧರಣಿ ನಡೆಸಿದರು.ಈ ವೇಳೆ ಸಮಾಧಾನ ಹೇಳಲು ಮುಂದಾದ ತಹಸೀಲ್ದಾರ್ ರಮೇಶ್ ಬಾಬು ಅವರು ಸಂಘಟನೆಗಳ ಪದಾಧಿಕಾರಿಗಳ ಆಕ್ರೋಶ ಎದುರಿಸಬೇಕಾಯಿತು.
ಭರವಸೆ: ವಿಷಯವನ್ನು ಶಾಸಕರ ಗಮನಕ್ಕೆ ತಂದು ವಿವಿಧ ಇಲಾಖೆಗಳ ಅಧಿಕಾರಿಗಳು ಕಡ್ದಾಯವಾಗಿ ಸಭೆಗೆ ಹಾಜರಾಗುವಂತೆ ಮಾಡಲಾಗುವುದು. ನವೆಂಬರ್ 4ರಂದು ಸಭೆ ನಡೆಸಲಾಗುವುದು ಎಂದು ತಹಸೀಲ್ದಾರ್ ಭರವಸೆ ನೀಡಿದ ನಂತರ ಪ್ರತಿಭಟನೆ ಕೈಬಿಡಲಾಯಿತು.