ಜಿಲ್ಲೆ

ಹಿಂದೂ ಸಂಘಟನೆಗಳ ಪ್ರತಿಭಟನೆ

ಸುನಿಲ್ ಪೊನ್ನೇಟಿ

ಮಡಿಕೇರಿ:

ಹಿಂದೂ ಜಾಗರಣ ವೇದಿಕೆ ಕರ್ನಾಟಕ ದಕ್ಷಿಣ ಪ್ರಾಂತ ಸಹ ಸಂಯೋಜಕ್ ಸತೀಶ್ ದಾವಣೆಗೆರೆ ಅವರನ್ನು ಕಾನೂನು ಬಾಹಿರವಾಗಿ ಬಂಧಿಸಲಾಗಿದೆ ಎಂದು ಆರೋಪಿಸಿ ಹಿಂದೂ ಜಾಗರಣ ವೇದಿಕೆ ವತಿಯಿಂದ ಮಡಿಕೇರಿಯಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು. ಜ. ತಿಮ್ಮಯ್ಯ ವೃತ್ತದಲ್ಲಿ ಸೇರಿದ ಸಂಘಟನೆಯ ಪ್ರಮುಖರು, ಕಾರ್ಯಕರ್ತರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ವೇಳೆ ಮಾತನಾಡಿದ ಹಿಂಜಾವೇ ಪ್ರಮುಖ ಅಜಿತ್‌ಕುಕ್ಕೇರ, ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಹಿಂದೂ ಕಾರ್ಯಕರ್ತರನ್ನು ಧಮನ ಮಾಡುವ ಕಾರ್ಯಕ್ಕೆ ಕೈ ಹಾಕಿದೆ. ತಮ್ಮ ಸಂಘಟನೆ ವತಿಯಿಂದ ಪ್ರತಿ ವರ್ಷವೂ ಅಖಂಡ ಭಾರತ ಸಂಕಲ್ಪ ಕಾರ್ಯಕ್ರಮ ಮಾಡುತ್ತಾ ಬರುತ್ತಿದೆ. ಅಖಂಡ ಭಾರತ ಪರಿಕಲ್ಪನೆ ಇಟ್ಟುಕೊಂಡು ಕಾರ್ಯಕ್ರಮ ಸಂದರ್ಭ ದಿಕ್ಸೂಚಿ ಭಾಷಣ ಮಾಡಿದ ಸತೀಶ್ ದಾವಣೆಗೆರೆ ಕೋಮುಪ್ರಚೋದಕವಾಗಿ ಮಾತನಾಡಿದ್ದಾರೆ ಎಂದು ಪ್ರಕರಣ ದಾಖಲಿಸಿ ಅವರನ್ನು ತಡ ರಾತ್ರಿ ಅಕ್ರಮವಾಗಿ ಬಂಧಿಸಲಾಗಿದೆ. ಪೊಲೀಸ್ ಇಲಾಖೆ ಮೂಲಕ ಸರ್ಕಾರ ಈ ಕೃತ್ಯ ಮಾಡಿಸಿದೆ ಎಂದು ಆರೋಪಿಸಿದರಲ್ಲದೆ ಸಿದ್ದರಾಮಯ್ಯ ಸರ್ಕಾರ ಹಿಂದಿನ ಅವಧಿಯಲ್ಲೂ ಹಿಂದೂ ವಿರೋಧಿ ನೀತಿ ಅನುಸರಿಸಿತ್ತು ಎಂದರು.

ಸತೀಶ್ ದಾವಣೆಗೆರೆ ಅವರನ್ನು ಗೌರಿಬಿದನೂರು ಪೊಲೀಸರು ಅಖಂಡ ಭಾರತ ಸಂಕಲ್ಪ ದಿನ ಕಾರ್ಯಕ್ರಮದಲ್ಲಿ ಕೋಮು ದ್ವೇಷ ಭಾಷಣವೆಂಬ ನೆಪದೊಂದಿಗೆ ಅನಗತ್ಯ ಕೇಸ್ ದಾಖಲಿಸಿ ಸತೀಶ್ ೪ ದಿನಗಳ ಬಳಿಕ ಮಧ್ಯರಾತ್ರಿ ಅಕ್ರಮ ಪ್ರವೇಶ ಮಾಡಿ ಮನೆಯವರನ್ನು ಬೆದರಿಸಿ ಕಾನೂನು ಬಾಹಿರವಾಗಿ ಬಂಧನ ಮಾಡಲಾಗಿದೆ ಎಂದು ಇದೇ ವೇಳೆ ಹೇಳಿದರು.

ನಗರಸಭೆ ಅಧ್ಯಕ್ಷೆ ಅನಿತಾ ಪೂವಯ್ಯ, ನಗರಸಭೆ ಬಿಜೆಪಿ ಸದಸ್ಯರು, ಹಿಂದೂ ಸಂಘಟನೆಗಳ ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.