ಜಿಲ್ಲೆ

ಪೌರಕಾರ್ಮಿಕರ ಬೇಡಿಕೆ ಈಡೇರಿಸಿ ; ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ

Tumakuru

ತುಮಕೂರು : ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಪೌರಕಾರ್ಮಿಕರ ಹುದ್ದೆ ಕಾಯಂ, ಸಮಾನ ವೇತನ ಸೇರಿ ಮತ್ತಿತರರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಗುರುವಾರ ಸಿಐಟಿಯು ನೇತೃತ್ವದಲ್ಲಿ ಜಿಲ್ಲಾ ಪೌರಕಾರ್ಮಿಕರ ಸಂಘದ ಸದಸ್ಯರು ಪ್ರತಿಭಟನೆ ನಡೆಸಿದರು.

ರಾಜ್ಯ ಮುನಿಸಿಪಲ್ ಕಾರ್ಮಿಕರ ಸಂಘ, ಪೌರ ಕಾರ್ಮಿಕರ ಸಂಘ, ಕಸದ ಅಟೋಚಾಲಕ- ಸಹಾಯಕರು, ನೀರು ಸರಬರಾಜು ನೌಕರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಸರ್ಕಾರ ಬೇಡಿಕೆಗಳನ್ನ ಈಡೇರಿಸದಿದ್ದರೆ ಮಾ.28, 29ರಂದು ರಾಜ್ಯದೆಲ್ಲೆಡೆ ನೀರು ಸರಬರಾಜು, ಸ್ವಚ್ಛತೆ ಕಾರ್ಯಗಳನ್ನು ಬಂದ್ ಮಾಡಿ ಮುಷ್ಕರ ನಡೆಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.

ಸಿಐಟಿಯು ಸೈಯದ್‌ಮುಜೀಬ್ ಮಾತನಾಡಿ, ಪೌರ ಕಾರ್ಮಿಕರು ಜೀವದ ಹಂಗು ತೊರೆದು ಸೇವೆ ಸಲ್ಲಿಸಿದ್ದಾರೆ. ಇವರ ಸೇವೆ ಕಾಯಂಗೊಳಿಸಬೇಕು ಎಂದರು.

ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆ, ನಗರ ಪಾಲಿಕೆಗಳಲ್ಲಿ ಗುತ್ತಿಗೆ, ಹೊರ ಗುತ್ತಿಗೆ, ನೇರ ಪಾವತಿ, ಸಮಾನ ಕೆಲಸಕ್ಕೆ ಸಮಾನ ವೇತನದ ಅಡಿಯಲ್ಲಿ ದುಡಿಯುತ್ತಿರುವ ಪೌರಕಾರ್ಮಿಕರ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿದರು.

ಮನವಿ ಸ್ವೀಕರಿಸಿದ ಕಾರ್ಮಿಕ ಆಧಿಕಾರಿ ರಮೇಶ್ ಮಾತನಾಡಿ, ಕಾರ್ಮಿಕರ ಬೇಡಿಕೆಯನ್ನು ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಕಳುಹಿಸಿಕೊಡಲಾಗುವುದು ಎಂದರು. ಮಹಾನಗರ ಪಾಲಿಕೆ ಮುಂಭಾಗದಲ್ಲಿಯೂ ಪ್ರತಿಭಟನೆ ನಡೆಸಿ ಆಯುಕ್ತೆ ರೇಣುಕಾಗೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ತಿಪಟೂರಿನ ರಮೇಶ್, ಕುಣಿಗಲ್ ಕೃಷ್ಣಪ್ಪ, ತುಮಕೂರು ಪೌರ ಕಾರ್ಮಿಕ ಕೆಂಪರಾಜು, ನಾಗರಾಜು, ಸಿ.ವೆಂಕಟೇಶ್, ಚಂದ್ರಣ್ಣ, ಮಂಜುನಾಥ್, ರ್ಇಾನ್, ಶ್ರೀನಿವಾಸ್, ಸಾಧೀಕ್‌ಪಾಷ, ಶಿವರಾಜು ಇದ್ದರು.

ಸಮಾನ ಕೆಲಸಕ್ಕೆ ಸಮಾನ ವೇತನ ನೀಡಿ : ಹತ್ತಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಕಾರ್ಮಿಕರಿಗೆ ಸೇವಾಭದ್ರತೆ, ಸಾಮಾಜಿಕ ಭದ್ರತೆ, ಇಲ್ಲದೆ ಗುತ್ತಿಗೆ, ಹೊರ ಗುತ್ತಿಗೆ, ನೇರ ಪಾವತಿ, ಸಮಾನ ಕೆಲಸಕ್ಕೆ ಸಮಾನ ವೇತನದ ಅಡಿಯಲ್ಲಿ ದುಡಿಯುತ್ತಿರುವ ಪೌರ ಕಾರ್ಮಿಕರು ಮತ್ತಿತರರಿಗೆ ಸೌಕರ್ಯ ಒದಗಿಸಬೇಕು ಎಂದು ಮುಖಂಡ ಎನ್.ಕೆ.ಸುಬ್ರಮಣ್ಯ ಒತ್ತಾಯಿಸಿದರು.

ಹುದ್ದೆಯನ್ನು ಕಾಯಂಗೊಳಿಸುವವರೆಗೂ ಎಲ್ಲ ಕಾರ್ಮಿಕರಿಗೆ ನೇರ ಪಾವತಿಯಡಿಯಲ್ಲಿ ಸಂಬಳ ನೀಡಬೇಕು, ಸುಪ್ರೀಂಕೋರ್ಟ್ ತೀರ್ಪಿನಂತೆ ಎಲ್ಲ ಕಾರ್ಮಿಕರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು, ಎಲ್ಲ ಕಾರ್ಮಿಕರಿಗೆ ವಾರದಲ್ಲಿ ಸಂಬಳ ಸಹಿತ ರಜೆ, ರಾಷ್ಟ್ರೀಯ ಹಬ್ಬಗಳ ರಜೆ ಹಬ್ಬಗಳರಜೆ, ಗಳಿಕೆ ರಜೆ, ಅನಾರೋಗ್ಯ ರಜೆ ನೀಡಬೇಕು ಎಂದರು.