ತುಮಕೂರು : ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸರ್ಕಾರಿ ಪದವಿ ಕಾಲೇಜು ಅತಿಥಿ ಉಪನ್ಯಾಸಕರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರ ಗುರುವಾರ ಕೂಡ ಮುಂದುವರಿಯಿತು. ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಧರಣಿ ಮುಂದುವರಿಸಿರುವ ಅತಿಥಿ ಉಪನ್ಯಾಸಕರಿಗೆ ಜಿಲ್ಲಾ ಕಾಂಗ್ರೆಸ್ ಸಮಿತಿ ಪದಾಧಿಕಾರಿಗಳು ಬೆಂಬಲ ಸೂಚಿಸಿ, ಭಾಗವಹಿಸಿದ್ದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ರಾಮಕೃಷ್ಣ ಮಾತನಾಡಿ, ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇನೆ, ನಿರುದ್ಯೋಗ ಹೋಗಲಾಡಿಸಿ ಯುವಕ-ಯುವತಿಯರಿಗೆ ಉದ್ಯೋಗ ಕಲ್ಪಿಸಿಕೊಡುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ನೀಡಿದ್ದ ಭರವಸೆ ಹುಸಿಯಾಗಿದ್ದು, ಯುವಜನರು ಸಂಕಷ್ಟದಲ್ಲಿದ್ದಾರೆ ಎಂದರು.
ಉನ್ನತ ಶಿಕ್ಷಣ ಪಡೆದ ಅತಿಥಿ ಉಪನ್ಯಾಸಕರು ಕನಿಷ್ಠ ಕೂಲಿಗೆ ಪದವಿ ವಿದ್ಯಾರ್ಥಿಗಳಿಗೆ ಪಾಠ ಮಾಡುವ ದುಸ್ಥಿತಿ ರಾಜ್ಯದಲ್ಲಿದೆ, ವಯೋಮಿತಿ ಮೀರುತ್ತಿರುವ ಉಪನ್ಯಾಸಕರ ಎಲ್ಲ ಬೇಡಿಕೆಗಳನ್ನು ಸರ್ಕಾರ ಕೂಡಲೇ ಈಡೇರಿಸಬೇಕು ಎಂದು ಆಗ್ರಹಿಸಿದರು.
ಬಡತನದ ನಡುವೆಯೇ ಕಷ್ಟಪಟ್ಟು ಓದಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಸಾವಿರಾರು ಜನರ ಕುಟುಂಬ ಬೀದಿಗೆ ಬಂದಿದೆ, ಕಾಯಂ ಉದ್ಯೋಗವೂ ಇಲ್ಲ, ಕೈತುಂಬ ಸಂಬಳ ಕೂಡ ಇಲ್ಲದೆ ಅತಂತ್ರರಾಗಿದ್ದಾರೆ ಎಂದರು.
ಮುಖಂಡ ಮುರಳೀಧರ ಹಾಲಪ್ಪ ಮಾತನಾಡಿ, ಶಿಕ್ಷಕ ವೃತ್ತಿಯನ್ನು ಗೌರವಿಸಬೇಕಾದದ್ದು ಪ್ರತಿಯೊಬ್ಬರ ಕರ್ತವ್ಯ ಕೂಡ ಆಗಿದೆ. ಅಂತಹುದರಲ್ಲಿ ರಾಜ್ಯಾದ್ಯಂತ ಸುಮಾರು 14500 ಅತಿಥಿ ಉಪನ್ಯಾಸಕರು, ತುಮಕೂರು ಜಿಲ್ಲೆಯಲ್ಲಿ 800 ಅತಿಥಿ ಉಪನ್ಯಾಸಕರು ವೇತನ ಮತ್ತು ಕಾಯಂ ಮಾಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದು ಕೂಡಲೇ ಸರ್ಕಾರ ಸ್ಪಂದಿಸಬೇಕು ಎಂದರು.
ವರ್ಷಕ್ಕೆ ನಾಲ್ಕೈದು ತಿಂಗಳ ವೇತನವಿಲ್ಲದಿದ್ದರೂ ಅತಿಥಿ ಉಪನ್ಯಾಸಕರು ತಮ್ಮ ಕುಟುಂಬ ಹೇಗೆ ನಿರ್ವಹಣೆ ಮಾಡಬೇಕು, ಕೇವಲ 11 ಸಾವಿರಕ್ಕೆ ಜೀವನ ನಡೆಸುವುದು ಹೇಗೆ ಎಂದು ಪ್ರಶ್ನಿಸಿದರು.
ಮುಖಂಡರಾದ ಕೆಂಚಮಾರಯ್ಯ, ಚಂದ್ರಶೇಖರಗೌಡ, ಮರಿಚೆನ್ನಮ್ಮ, ರೇವಣ್ಣ ಸಿದ್ದಯ್ಯ, ಗ್ರಾಪಂ ಸದಸ್ಯ ಯದು, ಗೀತಾ, ಸಾಹೇರ ಬಾನು, ಅತಿಥಿ ಉಪನ್ಯಾಸಕರಾದ ಡಾ.ಶಿವಣ್ಣ ತಿಮ್ಲಾಪುರ, ಕುಮಾರ್, ಸುನೀಲ್ ಕುಮಾರ್, ಅಂಜನಮೂರ್ತಿ, ಗಂಗಾಧರ, ಶ್ರೀನಿವಾಸಯ್ಯ, ಆನಂದ, ಲಕ್ಷ್ಮೀಭಟ್, ಸವಿತಾ, ಡಾ.ತಿಮ್ಮರಾಜು, ರಂಗಧಾಮಯ್ಯ ಮತ್ತಿತರರು ಇದ್ದರು.