ತುಮಕೂರು : ಕ್ಯಾತಸಂದ್ರದಿಂದ ಸಿದ್ಧಗಂಗಾ ಮಠಕ್ಕೆ ಸಂಪರ್ಕ ಕಲ್ಪಿಸುವ ರೈಲ್ವೆ ಅಂಡರ್ ಪಾಸ್ ನಿರ್ಮಾಣ ಕಾಮಗಾರಿ ಸ್ಥಗಿತ ಖಂಡಿಸಿ ಹಾಗೂ ರಸ್ತೆ ನಿರ್ಮಾಣಕ್ಕೆ ಆಗ್ರಹಿಸಿ ಅಂಬೇಡ್ಕರ್ ಯುವ ಸೇನೆ ಕಾರ್ಯಕರ್ತರು ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ನೇತೃತ್ವ ವಹಿಸಿದ್ದ ಜೆಡಿಎಸ್ ಮುಖಂಡ ನರಸೇಗೌಡ ಮಾತನಾಡಿ, ಕ್ಯಾತಸಂದ್ರದಿಂದ ಪ್ರತಿದಿನ ಸಾವಿರಾರು ಭಕ್ತರು, ಮಕ್ಕಳು ಶ್ರೀಮಠಕ್ಕೆ ಭೇಟಿ ನೀಡಬೇಕಿದ್ದು ಈಗ ರಸ್ತೆಯೇ ಇಲ್ಲದೇ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಅಂಡರ್‌ಪಾಸ್ ನಿರ್ಮಾಣ ಕಾಮಗಾರಿ ಸ್ಥಗಿತವಾಗಿದ್ದು ಮತ್ತಷ್ಟು ವಿಳಂಬವಾಗುವ ಸಾಧ್ಯತೆಯಿದೆ ಎಂದು ಹರಿಹಾಯ್ದರು.
ಕೇವಲ ಆರು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವ ಭರವಸೆ ರೈಲ್ವೆ ಇಲಾಖೆ ನೀಡಿತ್ತು. ಅದರೆ, ಒಂದುವರೆ ವರ್ಷ ಕಳೆದರೂ ಇನ್ನೂ ಕೆಲಸ ಮುಗಿದಿಲ್ಲ. ಭೂಮಿ ನೀಡಲು ಭೂ ಮಾಲೀಕರು ಹೆಚ್ಚಿನ ಪರಿಹಾರ ಕೇಳುತ್ತಿದ್ದಾರೆ. ಹಾಗಾಗಿ, ತೊಂದರೆಯಾಗಿದೆ ಎಂದು ಸಬೂಬು ಹೇಳಿ ಕೈಚೆಲ್ಲಿದ್ದಾರೆ ಎಂದರು.
ಒಂದು ವೇಳೆ ಸರ್ಕಾರ ಅಗತ್ಯ ಪರಿಹಾರ ನೀಡಲು ಹಣವಿಲ್ಲವೆಂದು ಹೇಳಿಕೆ ನೀಡಿದರೆ, ನಾವುಗಳೇ ಭಕ್ತರಿಂದ ಚಂದಾ ಎತ್ತಿ ಪರಿಹಾರ ನೀಡಲು ಸಿದ್ಧ. ಕಾಮಗಾರಿ ವಿಳಂಬ ಮಾಡುತ್ತಿರುವುದು ಸರ್ಕಾರ ಸಿದ್ಧಗಂಗಾ ಮಠಕ್ಕೆ ಮಾಡುತ್ತಿರುವ ಅಪವಾನ ಎಂಬುದು ಭಕ್ತರ ಅನಿಸಿಕೆಯಾಗಿದೆ. ಕೂಡಲೇ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಮನವಿ ಸ್ವೀಕರಿಸಿದ ತುಮಕೂರು ಉಪವಿಭಾಗಾಧಿಕಾರಿ ವಿ.ಅಜಯ್ ಮಾತನಾಡಿ, ಅಂಡರ್ ಪಾಸ್ ಅಪ್ರೋಚ್ ರಸ್ತೆಗೆ ಅಗತ್ಯವಿರುವ ಭೂಮಿ ನೀಡಲು ರತ್ನಮ್ಮ ಎಂಬುವವರು ಒಪ್ಪುತ್ತಿಲ್ಲ. ಅವರ ಪ್ರಕಾರ ನಗರ ಪ್ರದೇಶದ ಎಸ್‌ಆರ್ ರೇಟ್ ನೀಡಿ ಎಂಬುದಾಗಿದೆ. ಆದರೆ, ಅವರ ಭೂಮಿ ಪರಿವರ್ತನೆಯಾಗಿಲ್ಲದ ಕಾರಣ, ಅಡಿ ಲೆಕ್ಕದಲ್ಲಿ ಪರಿಹಾರದ ಹಣ ನಿಗದಿ ಸಾಧ್ಯವಿಲ್ಲ ಎಂದರು.
ಪ್ರತಿಭಟನೆಯಲ್ಲಿ ಸ್ಥಳೀಯ ಮುಖಂಡರಾದ ರವಿಕುಮಾರ್, ಅರವಿಂದ್,ಅಂಬೇಡ್ಕರ್ ಯುವ ಸೇನೆಯ ಜಿಲ್ಲಾ ಉಪಾಧ್ಯಕ್ಷ ಡಾ.ಎನ್.ವಿಜಯ್, ಮುಬಾರಕ್ ಆಲಿ, ತಾಲೂಕು ಅಧ್ಯಕ್ಷೆ ಸುಮಾ ಇದ್ದರು.
ಪ್ರತಿಭಟನಾ ಮೆರವಣಿಗೆ: ಸಿದ್ಧಗಂಗಾ ಮಠಕ್ಕೆ ಹೋಗುವ ರೈಲ್ವೆ ಅಂಡರ್‌ಪಾಸ್‌ನಿಂದ ಮುಖ್ಯರಸ್ತೆಯವರೆಗೆ ಮೆರವಣಿಗೆ ನಡೆಸಿದ ಕ್ಯಾತಸಂದ್ರದ ಹಿರಿಯ ಮುಖಂಡರು, ಪಾಲಿಕೆ ಸದಸ್ಯರು, ಬಡಾವಣೆಯ ನಾಗರಿಕರು, ಕಳೆದ ಒಂದು ವರ್ಷದಿಂದ ನೆನೆಗುದಿಗೆ ಬಿದ್ದಿರುವ ಅಂಡರ್ ಪಾಸ್ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸುವಂತೆ ಕಂದಾಯ, ಲೋಕೋಪಯೋಗಿ ಮತ್ತು ರೈಲ್ವೆ ಇಲಾಖೆ ಅಧಿಕಾರಿಗಳನ್ನು ಒತ್ತಾಯಿಸಿದರು.
ಒಂದುವರೆ ವರ್ಷದಿಂದ ರೈಲ್ವೆ ಅಂಡರ್ ಪಾಸ್ ಕಾಮಗಾರಿ ಕಂದಾಯ ಇಲಾಖೆ ಭೂಸ್ವಾಧೀನ ಪ್ರಕ್ರಿಯೆ ವಿಳಂಬದಿಂದ ನನೆಗುದಿಗೆ ಬಿದ್ದಿದೆ. ಯಾರೇ ಮಠಕ್ಕೆ ಹೋಗಬೇಕೆಂದರೂ ರೈಲ್ವೆ ಲೈನ್‌ಗೆ ಅಡ್ಡಲಾಗಿ ಹಾಕಿರುವ ಕಬ್ಬಿಣದ ಬೇಲಿ ದಾಟಿ ಹೋಗಬೇಕು. ಜಿ.ಗಣೇಶ್ ಅಂಬೇಡ್ಕರ್ ಯುವ ಸೇನೆಯ ಜಿಲ್ಲಾಧ್ಯಕ್ಷ