ತುಮಕೂರು : ಛೋಟಾ ಸಾಬರಪಾಳ್ಯದ 35 ವರ್ಷದ ಮಹಿಳೆ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ಅರೋಪಿಗಳನ್ನು ಪತ್ತೆ ಮಾಡದ ಪೊಲೀಸರ ವಿಳಂಬ ನೀತಿ ಖಂಡಿಸಿ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ನಗರದಲ್ಲಿ ಸೋಮವಾರ ತಿಗಳ ಸಮಾಜದ ನೇತೃತ್ವದಲ್ಲಿ ನಡೆದ ಬೃಹತ್ ಪ್ರತಿಭಟನೆಗೆ ಶಾಸಕ ಜಿ.ಬಿ.ಜ್ಯೋತಿಗಣೇಶ್, ಮೇಯರ್ ಬಿ.ಜಿ.ಕೃಷ್ಣಪ್ಪ, ಉಪಮೇಯರ್ ನಾಜಿಮಾಬಿ, ಸರ್ವಪಕ್ಷಗಳ ಪಾಲಿಕೆ ಸದಸ್ಯರು ಹಾಗೂ ವಿವಿಧ ಸಂಘಟನೆಗಳ ಕಾರ್ಯಕರ್ತರು ಸಾಥ್ ನೀಡಿದರು.
ಪ್ರತಿಭಟನಾಕಾರರು ಪೊಲೀಸರ ವಿರುದ್ಧ ೋಷಣೆಗಳನ್ನು ಕೂಗಿ ಆಕ್ರೋಶ ಹೊರಹಾಕಿದರು. ನಗರದ ಬಿಜಿಎಸ್ ವೃತ್ತದಲ್ಲಿ ಸಮಾವೇಶಗೊಂಡ ಪ್ರತಿಭಟನಾಕಾರರು ಅತ್ಯಾಚಾರ ಮಾಡಿ, ಕೊಲೆ ಮಾಡಿರುವ ಆರೋಪಿಯನ್ನು ಗಲ್ಲಿಗೇರಿಸಬೇಕು ಎಂದು ಒತ್ತಾಯಿಸಿದರು, ಆರೋಪಿಗಳ ಪ್ರತಿಕೃತಿಯೊಂದಿಗೆ ಬಿತ್ತಿಫಲಕಗಳನ್ನು ಹಿಡಿದು ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಆರೋಪಿಗಳನ್ನು ಕೂಡಲೇ ಬಂಧಿಸಿ ಉಗ್ರ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.
ಅಗ್ನಿವಂಶ ಕ್ಷತ್ರಿಯ ತಿಗಳ ಸಂದ ರಾಜ್ಯಾಧ್ಯಕ್ಷ ಸುಬ್ಬಣ್ಣ ಮಾತನಾಡಿ, ತಿಗಳ ಸಮುದಾಯ ರೈತ ಸಮುದಾಯದ ಹೆಣ್ಣು ಮಗಳಿಗೆ ಅನ್ಯಾಯವಾಗಿದ್ದರೂ ಪೊಲೀಸರು ಆ ಕುಟುಂಬಕ್ಕೆ ನ್ಯಾಯ ಕೊಡಿಸುವಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ, ಸಂತ್ರಸ್ತ ಕುಟುಂಬಕ್ಕೆ ಸರ್ಕಾರ ಕೂಡಲೇ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿದರು.
ಮೈಸೂರಿನಲ್ಲಿ ವಿದ್ಯಾರ್ಥಿನಿಯ ಮೇಲೆ ಗ್ಯಾಂಗ್ ರೇಪ್ ನಡೆದು ಕೆಲವೇ ದಿನದಲ್ಲಿ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಿದಂತೆ ತುಮಕೂರು ಘಟನೆಯನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳಬೇಕು, ತುಮಕೂರಿನಲ್ಲಿ ಟನೆ ನಡೆದು 7ದಿನಗಳೇ ಕಳೆದಿವೆ. ಇದುವರೆಗೂ ಆರೋಪಿಗಳ ಯಾವುದೇ ಸುಳಿವು ಸಿಗುತ್ತಿಲ್ಲ ಎಂದರೇ ಪೊಲೀಸರ ಕಾರ್ಯವೈಖರಿ ಬಗ್ಗೆಯೇ ಅನುಮಾನ ಮೂಡಿಸಿದೆ ಎಂದರು.
ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಮಾತನಾಡಿ, ಆರೋಪಿಗಳ ಪತ್ತೆಗೆ ಮೂರು ಪ್ರತ್ಯೇಕ ತಂಡ ರಚಿಸಲಾಗಿದ್ದು ಶೀಘ್ರದಲ್ಲಿಯೇ ಆರೋಪಿಗಳನ್ನು ಬಂಧಿಸುವುದಾಗಿ ಭರವಸೆ ನೀಡಿದರು. ಜೆಡಿಎಸ್ ಮುಖಂಡ ನರಸೇಗೌಡ, ಪಾಲಿಕೆ ಸದಸ್ಯರಾದ ಲಲಿತಾ, ಶಶಿಕಲಾ, ಟಿ.ಕೆ.ನರಸಿಂಹಮೂರ್ತಿ, ನಯಾಜ್ ಅಹ್ಮದ್, ಪ್ರೆಸ್ ರಾಜಣ್ಣ, ಜೆ.ಕುಮಾರ್, ಧರಣೇಂದ್ರಕುಮಾರ್ ಮತ್ತಿತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
ಇಸ್ಪೀಟ್ ದಂಧೆಗೆ ಕಡಿವಾಣ ಹಾಕಬೇಕಿದೆ: ತುಮಕೂರು ಸುತ್ತಮುತ್ತರ ಅರಣ್ಯ ಪ್ರದೇಶದಲ್ಲಿ ಇಸ್ಪೀಟ್ ದಂಧೆ ನಡೆಯುತ್ತಿರುವುದು ಅಪರಾಧ ಚಟುವಟಿಕೆ ಹೆಚ್ಚಾಗಲು ಪ್ರೇರಣೆಯಾಗಿದೆ, ಈ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ ಇದ್ದರೂ ಸಮಾಜಘಾತುಕ ಚಟುವಟಿಕೆಗೆ ಕೆಲವು ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಯೇ ಬೆಂಬಲ ನೀಡುತ್ತಿದ್ದಾರೆ ಎಂಬ ಆರೋಪವಿದೆ.
ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದ ಶಾಸಕ ಡಿ.ಸಿ.ಗೌರಿಶಂಕರ್ ಕೂಡ ನೇರವಾಗಿಯೇ ಈ ಆರೋಪ ಮಾಡಿದ್ದರು. ಅತ್ಯಾಚಾರ ಹಾಗೂ ಹತ್ಯೆ ನಡೆದಿರುವ ಛೋಟಾಸಾಬರ ಪಾಳ್ಯದ ಸುತ್ತಮುತ್ತ ಇಸ್ಪೀಟ್, ಮದ್ಯಸೇವನೆಗೆ ಗುಂಪುಗಳು ಬರುವುದನ್ನು ಸ್ಥಳೀಯರೇ ಪೊಲೀಸರಿಗೆ ಮಾಹಿತಿ ನೀಡಿದ್ದು ಆರೋಪಿಗಳಿಗೆ ಪುಷ್ಠಿ ನೀಡಿದೆ.