ಅಡುಗೆ ಅನಿಲ ಬೆಲೆಯೇರಿಕೆ ಖಂಡಿಸಿ ಐಎನ್‌ಟಿಯುಸಿ ವತಿಯಿಂದ ಪ್ರತಿಭಟನಾ ಮೆರವಣಿಗೆ ನಡೆಯಿತು.
- ಪಿ.ಜಿ.ದೇವ್ ಟೀಕೆ ಅಡುಗೆ ಅನಿಲ ಬೆಲೆ ಏರಿಕೆ ವಿರೋಧಿಸಿ ಐಎನ್‌ಟಿಯುಸಿ ಪ್ರತಿಭಟನೆ
ವಿಜಯವಾಣಿ ಸುದ್ದಿಜಾಲ ಕಾಸರಗೋಡು
ಪ್ರಧಾನಮಂತ್ರಿ ನರೇಂದ್ರಮೋದಿ ಘೋಷಿಸಿರುವ ಆರ್ಥಿಕ ತುರ್ತುಸ್ಥಿತಿ ಮತ್ತು ಲಾಕ್‌ಡೌನ್ ದೇಶದ ಕಾರ್ಮಿಕರು ಮತ್ತು ಸಾಮಾನ್ಯ ಜನರನ್ನು ವಂಚಿಸುವ ಹಾಗೂ ಭಾರತವನ್ನು ಬಂಡವಾಳಶಾಹಿ ಸಮಾಜಕ್ಕೆ ಅಧೀನಗೊಳಿಸುವ ರಹಸ್ಯ ಅಜೆಂಡಾವಾಗಿದೆ ಎಂದು ಐಎನ್‌ಟಿಯುಸಿ ಜಿಲ್ಲಾಧ್ಯಕ್ಷ ಪಿ.ಜಿ.ದೇವ್ ಹೇಳಿದರು.
ಅಡುಗೆ ಅನಿಲ ಬೆಲೆ ಏರಿಕೆ ಖಂಡಿಸಿ ಐಎನ್‌ಟಿಯುಸಿ ಕಾಸರಗೋಡು ಜಿಲ್ಲಾ ಸಮಿತಿ ವತಿಯಿಂದ ನಗರದ ಮುಖ್ಯ ಅಂಚೆ ಕಚೇರಿ ಎದುರು ಆಯೋಜಿಸಲಾದ ಪ್ರತಿಭಟನೆ ಉದ್ಘಾಟಿಸಿ ಮಾತನಾಡಿದರು.
ಯುದ್ಧದ ನೆಪದಲ್ಲಿ ಕೇಂದ್ರ ಸರ್ಕಾರ ಅಡುಗೆ ಎಣ್ಣೆ ಮತ್ತು ಅನಿಲದ ಬೆಲೆ ಹೆಚ್ಚಿಸಿರುವುದರಿಂದ ಅನೇಕ ಹೋಟೆಲ್‌ಗಳು ಮತ್ತು ವಾಣಿಜ್ಯ ಸಂಸ್ಥೆಗಳು ಮುಚ್ಚುವ ಹಂತದಲ್ಲಿವೆ. ಕಾರ್ಮಿಕರು ತಮ್ಮ ಉದ್ಯೋಗ ಕಳೆದುಕೊಂಡಿದ್ದರೆ, ಹೊರರಾಜ್ಯಗಳ ಕಾರ್ಮಿಕರು ತಮ್ಮ ಆದಾಯ ಮತ್ತು ಉದ್ಯೋಗ ಬಿಟ್ಟು ರಾಜ್ಯ ತೊರೆಯುತ್ತಿದ್ದಾರೆ. ಬೆಲೆ ಏರಿಕೆ ನಿಯಂತ್ರಣ, ಅನಿಲ ಸಿಲಿಂಡರ್‌ಗಳ ಕಾಳಸಂತೆ ತಡೆಗೆ ಕೇಂದ್ರ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದರು.
ಟಿ.ವಿ.ಕುಞಿರಾಮನ್ ಅಧ್ಯಕ್ಷತೆ ವಹಿಸಿದ್ದರು. ಎನ್.ಗಂಗಾಧರನ್, ಥಾಮಸ್ ಸೆಬಾಸ್ಟಿಯನ್, ಸಿ.ವಿ.ಭಾವನನ್, ಅರ್ಜುನನ್ ತಾಯಿಲಂಗಡಿ, ಸಮೀರ ಖಾದರ್, ಪವಿತ್ರನ್ ಸಿ.ನಾಯರ್, ಮಾಧವನ್ ನಾಯರ್, ಎಂ.ಕೆ.ಎಂ.ವಿ.ಪದ್ಮನಾಭನ್ ಮೊದಲಾದವರು ಭಾಗವಹಿಸಿದರು. ಕಾರ್ಯಕ್ರಮಕ್ಕೂ ಮೊದಲು ಅಡುಗೆ ಅನಿಲ ಸಿಲಿಂಡರ್‌ನೊಂದಿಗೆ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಯಿತು.