ಜಿಲ್ಲೆ

ರೈತರ ಪ್ರತಿಭಟನೆ: ಪೊಲೀಸರಿಂದ ಬಂಧನ ಬಿಡುಗಡೆ

ಡಿ.ವಿ. ಕಮ್ಮಾರ

ಬೆಳಗಾವಿ: ಸಕ್ಕರೆ ಕಾರ್ಖಾನೆಗಳು ರೈತರ ಪ್ರತಿ ಟನ್ ಕಬ್ಬಿಗೆ 3,500ರೂ. ದರ ನೀಡಬೇಕು ಎಂದು ಆಗ್ರಹಿಸಿ ನಗರ ಹೊರವಲಯದ ಬೆಳಗಾವಿ-ಬಾಗಲಕೋಟೆ ರಾಜ್ಯ ಹೆದ್ದಾರಿಯ ರೈತ ವೃತ್ತದಲ್ಲಿ ಸಂಚಾರ ತಡೆದು ಪ್ರತಿಭಟಿಸಿದ ರೈತರನ್ನು ಭಾನುವಾರ ಪೊಲೀಸರು ವಶಕ್ಕೆ ಪಡೆದು, ನಂತರ ಬಿಡುಗಡೆಗೊಳಿಸಿದರು.

ಮೂಡಲಗಿ ತಾಲೂಕಿನ ಗುರ್ಲಾಪುರ ಕ್ರಾಸ್‌ನಲ್ಲಿ ನಡೆಯುತ್ತಿರುವ ರೈತರ ಅಹೋರಾತ್ರಿ ಹೋರಾಟ ಬೆಂಬಲಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ್ದ ರೈತರು, ಸಕ್ಕರೆ ಕಾರ್ಖಾನೆಗಳು ಹಾಗೂ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಪೊಲೀಸರ ಮನವೋಲಿಕೆಗೆ ಹಿಂದೆ ಸರಿಯದ ರೈತರು, ಒಂದು ತಾಸಿಗೂ ಹೆಚ್ಚು ಹೊತ್ತು ರಸ್ತೆ ಸಂಚಾರ ತಡೆದರು. ಕೊನೆಗೆ ಪ್ರತಿಭಟನಕಾರರನ್ನು ವಶಕ್ಕೆ ಪಡೆದ ಪೊಲೀಸರು ರಸ್ತೆಯನ್ನು ಸಂಚಾರಕ್ಕೆ ಮುಕ್ತಗೊಳಿಸಿದರು.

ಪ್ರತಿಭಟನೆಯಲ್ಲಿ ರೈತ ಮುಖಂಡ ಪ್ರಕಾಶ ನಾಯಕ ಮಾತನಾಡಿ, ನ್ಯಾಯಯುತವಾದ ದರ ಸಿಗದೆ ಕಬ್ಬು ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಮೂಡಲಗಿ ತಾಲ್ಲೂಕಿನ ಗುರ್ಲಾಪುರ ಕ್ರಾಸ್‌ನಲ್ಲಿ ಅಹೋರಾತ್ರಿ ಧರಣಿ ಸತ್ಯಾಗ್ರಹ ಆರಂಭಿಸಲಾಗಿದೆ. ಆದರೆ ಜಿಲ್ಲಾಡಳಿತ ಮತ್ತು ಸರ್ಕಾರ ಸ್ಪಂದಿಸುತ್ತಿಲ್ಲ. ಈ ಹೋರಾಟ ಬೆಂಬಲಿಸಿ ವಿವಿಧೆಡೆ ಪ್ರತಿಭಟನೆಗಳು ಆರಂಭಗೊಂಡಿದ್ದು, ಆದಷ್ಟು ಬೇಗ ನಮ್ಮ ಬೇಡಿಕೆಯಂತೆ ಕಬ್ಬಿಗೆ ದರ ನಿಗದಿಪಡಿಸಿ, ನಂತರ ಕಬ್ಬು ನುರಿಸುವ ಹಂಗಾಮು ಆರಂಭಿಸಬೇಕು ಎಂದು ಆಗ್ರಹಿಸಿದರು.

ಶಿವಾನಂದ ಮುಗಳಿಹಾಳ, ರಾಜು ಮರ್ವೆ, ಅಡಿವೇಶ ಇಟಗಿ, ಕಿಶನ್ ನಂದಿ, ರಮೇಶ ವಾಲಿ, ಶ್ರಿನಿವಾಸ ಗೌಡರ, ಅರ್ಜುನ ಮಡಿವಾಳ ಇತರರಿದ್ದರು.