ಜಿಲ್ಲೆ

ಸರ್ಕಾರದ ವಿರುದ್ಧ ಸಿಡಿದೆದ್ದ ರೈತರು

ಶಿವರಾಜ.ಎಂ

 ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ

ಗ್ರಾಮಾಂತರ ಜಿಲ್ಲೆಯ ಹಲವು ಕಡೆಗಳಲ್ಲಿ ಭೂಸ್ವಾಧೀನಕ್ಕೆ ಕೈಹಾಕಿರುವ ರಾಜ್ಯ ಸರ್ಕಾರದ ವಿರುದ್ಧ ಜಿಲ್ಲೆಯ ರೈತ ವರ್ಗ ಆಕ್ರೋಶದಿಂದ ಕುದಿಯುತ್ತಿರುವ ನಡುವೆಯೇ ದೊಡ್ಡಬಳ್ಳಾಪುರ ತಾಲೂಕು ದೊಡ್ಡಬೆಳವಂಗಲ ಹೋಬಳಿ ವ್ಯಾಪ್ತಿಯಲ್ಲಿ ಭೂಮಿಯ ಮೇಲೆ ಕಣ್ಣಾಕಿರುವ ಸರ್ಕಾರದ ವಿರುದ್ಧ ದೊಡ್ಡಬಳ್ಳಾಪುರ ತಾಲೂಕು ವ್ಯಾಪ್ತಿಯ ರೈತ ಸಂಘಟನೆಗಳು ಸಿಡಿದೆದ್ದಿದ್ದು, ಹೋರಾಟದ ಪ್ರಹಾರ ನಡೆಸಲು ಸಜ್ಜಾಗಿವೆ.

2276 ಎಕರೆ ಭೂಸ್ವಾಧೀನ? ದೊಡ್ಡ ಬೆಳವಂಗಲ ಹೋಬಳಿಯ ದೊಡ್ಡಹೆಜ್ಜಾಜಿ, ಕಾರೇಪುರ, ಅಯ್ಯನಹಳ್ಳಿ ಮತ್ತು ವೆಂಕಟೇಶಪುರ ಗ್ರಾಮಗಳ ವ್ಯಾಪ್ತಿಯಲ್ಲಿ ಸುಮಾರು 2760 ಎಕರೆ ಕೃಷಿ ಭೂಮಿಯನ್ನು ಕರ್ನಾಟಕ ಗೃಹ ಮಂಡಳಿಯು ಭೂಸ್ವಾಧೀನಪಡಿಸಿಕೊಳ್ಳಲು ಮುಂದಾಗಿದೆ ಎಂಬ ವಿಷಯಕ್ಕೆ ಈ ಭಾಗದ ರೈತರು ಕನಲಿಹೋಗಿದ್ದಾರೆ. ರಾಗಿ,ಜೋಳ ಸೇರಿ ಹಲವು ಬಗೆಯ ತೋಟಗಾರಿಕೆ ಬೆಳೆಗಳನ್ನು ಬೆಳೆಯುತ್ತಿರುವ ಕೃಷಿ ಭೂಮಿಯನ್ನು ಕಬ್ಜಾ ಮಾಡಿಕೊಳ್ಳಲು ಹೊರಟಿರುವ ಸರ್ಕಾರದ ಕ್ರಮದ ವಿರುದ್ಧ ಸರಣಿ ಸಭೆಗಳನ್ನು ನಡೆಸುತ್ತಿರುವ ಕರ್ನಾಟಕ ಪ್ರಾಂತ ರೈತ ಸಂಘದ ಹಾಗೂ ಕರ್ನಾಟಕ ಗೃಹ ಮಂಡಳಿಯ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ಸದಸ್ಯರು ಗ್ರಾಮಗಳನ್ನು ಸುತ್ತಿ ರೈತರನ್ನು ಒಗ್ಗೂಡಿಸುವ ಮೂಲಕ ದೊಡ್ಡಮಟ್ಟದ ಹೋರಾಟಕ್ಕೆ ವೇದಿಕೆ ಸಿದ್ದಪಡಿಸುತ್ತಿದ್ದಾರೆ.

ರೈತರಿಂದ ಪ್ರತಿಭಟನೆ ಕಾವು: ಈಗಾಗಲೇ ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣ ಹೋಬಳಿ ವ್ಯಾಪ್ತಿ ಹಾಗೂ ಹೊಸಕೋಟೆ ತಾಲೂಕು ನಂದುಗುಡಿ ಹೋಬಳಿ ವ್ಯಾಪ್ತಿಯಲ್ಲಿ ಭೂಸ್ವಾಧೀನಕ್ಕೆ ತೀವ್ರ ವಿರೋಧ ಎದುರಿಸುತ್ತಿರುವ ಸರ್ಕಾರ ದೊಡ್ಡಬಳ್ಳಾಪುರ ತಾಲೂಕು ವ್ಯಾಪ್ತಿಯಲ್ಲಿಯೂ ರೈತರೊಂದಿಗೆ ಕದನಕ್ಕೆ ಎಡೆಮಾಡಿಕೊಟ್ಟಿದೆ. ನೆಲಮಂಗಲದಲ್ಲಿ ಏರ್‌ಪೋರ್ಟ್ ನಿರ್ಮಾಣದ ಸುದ್ದಿಯ ಸದ್ದು ಅಡಗಿರುವುದರಿಂದ ತಾತ್ಕಾಲಿಕವಾಗಿ ನೆಲಮಂಗಲ ಭಾಗದಲ್ಲಿ ಕಾವು ಬೂದಿಮುಚ್ಚಿದ ಕೆಂಡದಂತಿದೆ. ರಾಜ್ಯ ರಾಜಧಾನಿ ಬೆಂಗಳೂರಿನ ಗಡಿಹಂಚಿಕೊಂಡಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವ್ಯಾಪ್ತಿಯಲ್ಲಿ ಭೂಸ್ವಾಧೀನಕ್ಕೆ ಸರ್ಕಾರ ಒತ್ತು ನೀಡುತ್ತಿರುವುದು ಜಿಲ್ಲೆಯ ರೈತಾಪಿ ಜನರ ಸಿಟ್ಟಿಗೆ ಕಾರಣವಾಗಿದೆ.

ಪರಿವೀಕ್ಷಣಾ ಮಂದಿರದಲ್ಲಿ ಸಭೆ: ಕರ್ನಾಟಕ ಪ್ರಾಂತ ರೈತ ಸಂಘದ ಹಾಗೂ ಕರ್ನಾಟಕ ಗೃಹ ಮಂಡಳಿಯ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿಯ ವತಿಯಿಂದ ದೊಡ್ಡಬಳ್ಳಾಪುರದ ತಾಲೂಕಿನ ಎಲ್ಲ ರೈತ ಸಂಘಗಳು, ದಲಿತ ಸಂಘಟನೆಗಳು, ಮಹಿಳಾ ಸಂಘ, ವಿದ್ಯಾರ್ಥಿ ಸಂಘ ಹಾಗೂ ಕನ್ನಡಪರ ಸಂಘಟನೆಗಳ ಮುಖಂಡರ ಸಮ್ಮುಖದಲ್ಲಿ ದೊಡ್ಡಬಳ್ಳಾಪುರ ನಗರದ ಪರಿವೀಕ್ಷಣಾಮಂದಿರದಲ್ಲಿ ಶನಿವಾರ ಸಭೆ ನಡೆಸಿ ಹೋರಾಟದ ರೂಪುರೇಷೆ ಬಗ್ಗೆ ಚರ್ಚೆ ನಡೆಸಲಾಗಿದೆ.

ನಗರದಲ್ಲಿ ಮೆರವಣಿಗೆ, ಕಾಲ್ನಡಿಗೆ ಜಾಥಾ: ದೊಡ್ಡಬೆಳವಂಗಲ ಹೋಬಳಿಯ ದೊಡ್ಡಹೆಜ್ಜಾಜಿ ಕಾರೇಪುರ, ಅಯ್ಯನಹಳ್ಳಿ ಮತ್ತು ವೆಂಕಟೇಶಪುರ ಗ್ರಾಮಗಳ ವ್ಯಾಪ್ತಿಯ 2760 ಎಕರೆ ಜಮೀನು ಭೂಸ್ವಾಧೀನ ಕ್ರಮವನ್ನು ವಿರೋಧಿಸಿ ಅ.28 ರಂದು ದೊಡ್ಡಬಳ್ಳಾಪುರದ ಶ್ರೀ ನೆಲದಾಂಜನೇಯ ಸ್ವಾಮಿ ದೇವಸ್ಥಾನದ ಬಳಿಯಿಂದ ಮೆರವಣಿಗೆಯ ಮೂಲಕ ತೆರಳಲಿರುವ ಹೋರಾಟಗಾರರು ದೊಬಳ್ಳಾಪುರ ನಗರದ ಪ್ರಮುಖ ಬೀದಿಯಲ್ಲಿ ಕಾಲ್ನಡಿಗೆ ಜಾಥಾ ನಡೆಸಲಿದ್ದಾರೆ. ಬಳಿಕ ದೊಡ್ಡಬಳ್ಳಾಪುರ ತಾಲೂಕು ಕಚೇರಿ ತಲುಪಿ ಅಲ್ಲಿ ತಹಸೀಲ್ದಾರ್ ಮತ್ತು ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಭೂಸ್ವಾಧೀನಕ್ಕೆ ಅವಕಾಶ ನೀಡುವುದಿಲ್ಲ ಎಂಬ ಪ್ರತಿಜ್ಞೆ ಮಾಡುವ ಮೂಲಕ ಸರ್ಕಾರಕ್ಕೆ ಸಂದೇಶ ರವಾನಿಸುವ ಪ್ರಯತ್ನ ನಡೆಯಲಿದೆ.

ನಾವ್ಯಾರು ಭೂಮಿಯನ್ನು ಬಿಡುವುದಿಲ್ಲ, ನಮ್ಮ ಭೂಮಿ ನಮ್ಮ ಹಕ್ಕು ಎಂಬ ೋಷವಾಕ್ಯದೊಂದಿಗೆ ಸರ್ಕಾರಕ್ಕೆ ಎಚ್ಚರಿಕೆ ರವಾನಿಸಲಾಗುವುದು. ಇದೊಂದು ಸಾಂಕೇತಿಕ ಪ್ರತಿಭಟನೆಯಾಗಿದ್ದು ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಮನದಟ್ಟು ಮಾಡುವ ಪ್ರಯತ್ನ ಇದಾಗಿದೆ. ರೈತಾಪಿ ಸಮುದಾಯದ ಉಳಿವಿಗಾಗಿ ಈ ಪ್ರತಿಭಟನೆ ಹಮ್ಮಿಕೊಂಡಿದ್ದು, ತಾಲೂಕಿನ ಎಲ್ಲ ರೈತ ಬಾಂಧವರು, ಸಂಘಟನೆಯವರು ಮಹಿಳೆಯರು, ವಿದ್ಯಾರ್ಥಿಗಳು ಪಾಲ್ಗೊಳ್ಳಬೇಕು ಎಂದು ಮನವಿ ಮಾಡುತ್ತೇವೆ.

ರಾಮಕೃಷ್ಣಯ್ಯ, ಭೂಸ್ವಾಧೀನ ವಿರೋಧಿ ಸಮಿತಿ ಮುಖಂಡ