ಸಿದ್ದಾಪುರ: ವಿರಾಜಪೇಟೆ ತಾಲೂಕಿನ ಸಿದ್ದಾಪುರದಲ್ಲಿ ಅಂತಾರಾಜ್ಯಕ್ಕೆ ಸಂಪರ್ಕ ಕಲ್ಪಿಸುವ ಕೊಣನೂರು-ಮಾಕುಟ್ಟ ರಾಜ್ಯ ಹೆದ್ದಾರಿಯ ಪಾಲಿಬೆಟ್ಟ ರಸ್ತೆಯಿಂದ ಇಂಜಿಲಗೆರೆ ಗ್ರಾಮದವರೆಗೆ ಸುಮಾರು 2 ಕಿ.ಮೀ. ರಸ್ತೆ ವಿಸ್ತರಣೆ ಹಾಗೂ ಡಾಂಬರೀಕರಣ ಕಾಮಗಾರಿ ಪ್ರಾರಂಭಿಸಿ, 11 ತಿಂಗಳು ಕಳೆದರೂ ಪೂರ್ಣಗೊಳ್ಳದ ಕಾರಣ ನಾಗರಿಕ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ಅ.23 ರಂದು ಬಂದ್‌ಗೆ ಕರೆ ನೀಡಲಾಗಿದೆ.
ಸಮಿತಿ ಅಧ್ಯಕ್ಷ ಗಿರೀಶ್ ಮಾತನಾಡಿ, ವಿರಾಜಪೇಟೆ ಶಾಸಕ, ಮುಖ್ಯಮಂತ್ರಿ ಕಾನೂನು ಸಲಹೆಗಾರ ಪೊನ್ನಣ್ಣ ಅವರು ಭೂಮಿಪೂಜೆ ನೆರವೇರಿಸಿ, ಒಂದು ವರ್ಷವಾದರೂ ರಸ್ತೆ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸುತ್ತಿಲ್ಲ. ಗುತ್ತಿಗೆದಾರರು ರಾತ್ರಿ ವೇಳೆ ಕಾಮಗಾರಿ ನಡೆಸುತ್ತಿದ್ದು ದಿನಕ್ಕೆ ಕೇವಲ 50 ಮೀಟರ್ ಮಾತ್ರ ಕೆಲಸ ನಿರ್ವಹಿಸುತ್ತಿದ್ದಾರೆ. ಇದರಿಂದಾಗಿ ವಾಹನ ಸವಾರರು, ಸಾರ್ವಜನಿಕರು, ಶಾಲಾ ವಿದ್ಯಾರ್ಥಿಗಳು ಹಾಗೂ ವರ್ತಕರು ನರಕಯಾತನೆ ಅನುಭವಿಸುತ್ತಿದ್ದಾರೆ ಎಂದು ದೂರಿದರು.
ಕಳೆದ ವಾರ ಸುಮಾರು 4 ಗಂಟೆಗಳ ಕಾಲ ವಾಹನ ಸಂಚಾರಕ್ಕೆ ತೊಂದರೆಯಾಗಿತ್ತು. ಇದರಿಂದ ವಿದ್ಯಾರ್ಥಿಗಳು ತಡವಾಗಿ ಶಾಲೆಗೆ ಸೇರುವಂತಾಗಿದೆ. ಇದೇ ಸಂದರ್ಭದಲ್ಲಿ ಮಹಿಳೆಯೊಬ್ಬರು ತಮ್ಮ ಸ್ಕೂಟರ್‌ನಿಂದು ಬಿದ್ದು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಮಕ್ಕಳು ಕೆಸರಿನಲ್ಲಿ ಬಿದ್ದು ತೊಂದರೆಯಾಗಿತ್ತು. ಸಾರ್ವಜನಿಕರು ಎಷ್ಟೇ ಒತ್ತಾಯಿಸದರೂ ಗುತ್ತಿಗೆದಾರರು ನಿರ್ಲಕ್ಷೃದಿಂದ ವರ್ತಿಸುತ್ತಿದ್ದಾರೆ. ಹೀಗಾಗಿ ಅ.23 ರಂದು ಬೆಳಗ್ಗೆ 6ರಿಂದ 1ಗಂಟೆಯವರೆಗೆ ಅಂಗಡಿ-ಮುಂಗಟ್ಟುಗಳನ್ನು ಸ್ವಯಂ ಪ್ರೇರಿತರಾಗಿ ಬಂದ್ ಮಾಡುವಂತೆ ಮನವಿ ಮಾಡಿದರು.
ಸಾಮಾಜಿಕ ಕಾರ್ಯಕರ್ತ ಮುಸ್ತಾಫ ಮಾತನಾಡಿ, ಈ ಹಿಂದೆ ಇಂಜಿನಿಯರ್ ಅವರನ್ನು ತರಾಟೆಗೆ ತೆಗೆದುಕೊಂಡ ಸಂದರ್ಭದಲ್ಲಿ 20 ದಿನದ ಕಾಲಾವಕಾಶ ನೀಡಿದಲ್ಲಿ ಕಾಮಗಾರಿ ಮುಗಿಸುವ ಭರವಸೆ ನೀಡಿದ್ದರು. ಆದರೆ 7ತಿಂಗಳು ಕಳೆದರೂ ಕಾಮಗಾರಿ ಮುಗಿಸದ ಹಿನ್ನೆಲೆಯಲ್ಲಿ ಹೋರಾಟ ಅನಿವಾರ್ಯವಾಗಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಕೈಜೋಡಿಸುವಂತೆ ವಿನಂತಿಸಿದರು.
ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ರೀನಾ ತುಳಸಿ, ಆಟೋಚಾಲಕ ಹುಸೇನ್, ಪಂ.ಸ ಆನಂದ, ಜಯರಾಂ, ರೂಪೇಶ್, ಸಿದ್ದಿಕ್, ರಿಯಾಜ್ ಸೇರಿದಂತೆ ವರ್ತಕರು ಹಾಜರಿದ್ದರು.