ಜಿಲ್ಲೆ

ಅರಣ್ಯ ಕಾಲೇಜು ವಿದ್ಯಾರ್ಥಿಗಳಿಂದ ಮುಂದುವರಿದ ಪ್ರತಿಭಟನೆ

ಸುನಿಲ್ ಪೊನ್ನೇಟಿ

ಮಡಿಕೇರಿ:

ಅರಣ್ಯ ಇಲಾಖೆ ಹುದ್ದೆಗಳಲ್ಲಿ ಅರಣ್ಯ ಪದವೀಧರರಿಗೆ ಮೀಸಲಾತಿಗೆ ಆಗ್ರಹಿಸಿ ಪೊನ್ನಂಪೇಟೆ ಅರಣ್ಯ ಕಾಲೇಜು ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆ ಸೋಮವಾರವೂ ಮುಂದುವರಿದಿತ್ತು. ತರಗತಿಗಳನ್ನು ಬಹಿಷ್ಕರಿಸಿದ ವಿದ್ಯಾರ್ಥಿಗಳು ಕಾಲೇಜು ಆವರಣದಲ್ಲಿ ಪ್ರತಿಭಟನೆ ನಡೆಸಿದರು.

ರೂಪಕ, ನಾಟಕಗಳ ಮೂಲಕ ತಮ್ಮ ಬೇಡಿಕೆಗಳನ್ನು ಮುಂದಿಟ್ಟರು.

ಅರಣ್ಯ ಸೇವೆಯಲ್ಲಿನ ಅರಣ್ಯ ಸಂರಕ್ಷಣಾಧಿಕಾರಿ, ವಲಯ ಅರಣ್ಯಾಧಿಕಾರಿ ಹಾಗೂ ಉಪವಲಯ ಅರಣ್ಯಾಧಿಕಾರಿ ಹುದ್ದೆಗಳ ನೇಮಕಾತಿಯು ಕರ್ನಾಟಕ ನಾಗರಿಕ ಸೇವೆಗಳ ಸಾಮಾನ್ಯ ನೇಮಕಾತಿ ನಿಯಮಗಳು ಮತ್ತು ಅದರ ಅಡಿಯಲ್ಲಿ ಅರಣ್ಯ ಇಲಾಖೆಗೆ ರಚಿಸಿರುವ ಕರ್ನಾಟಕ ಅರಣ್ಯ ಸೇವಾ ನೇಮಕಾತಿ ನಿಯಮಗಳು ಹಾಗೂ ವಿಶೇಷ ನಿಯಮಗಳನ್ವಯ ನಡೆಯುತ್ತಾ ಬಂದಿದೆ.

ಕರ್ನಾಟಕ ಅರಣ್ಯ ಇಲಾಖೆಯಲ್ಲಿ ಈ ಹುದ್ದೆಗಳ ಭರ್ತಿಗಾಗಿ ನಿರ್ದಿಷ್ಟ ನೇಮಕಾತಿ ಮಾನದಂಡಗಳನ್ನು, ವಿದ್ಯಾರ್ಹತೆ ಮತ್ತು ಮೀಸಲಾತಿ ಕ್ಷೇತ್ರಗಳ ಆಧಾರದ ಮೇಲೆ ಮತ್ತು ಇಲಾಖೆಯ ಸಿಬ್ಬಂದಿಗಳಿಗೆ ಮೀಸಲಾತಿಯನ್ನು ಕರ್ನಾಟಕ ಸರ್ಕಾರದ ಆದೇಶ ಮತ್ತು ವಿಶೇಷ ನಿಯಮಗಳನ್ವಯ ಜಾರಿಗೊಳಿಸಿದೆ.

2009 ರಲ್ಲಿ ಕರ್ನಾಟಕ ಅರಣ್ಯ ಸೇವಾ ನೇಮಕಾತಿ ತಿದ್ದುಪಡಿ ನಿಯಮದನ್ವಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ವಲಯ ಅರಣ್ಯಾಧಿಕಾರಿ ಹುದ್ದೆಗಳಲ್ಲಿ ಶೇ.50ರಷ್ಟು ಮೀಸಲಾತಿಯನ್ನು ಇಲಾಖಾ ಅಭ್ಯರ್ಥಿಗಳಿಗೆ ನೀಡಲಾಗಿದೆ. 2012ರ ಅಧಿಸೂಚನೆಯಲ್ಲಿ ಈ ಕ್ಷೇತ್ರಾಧಿಕಾರಿ ಹುದ್ದೆಗಳನ್ನು ಕೃಷಿ, ತೋಟಗಾರಿಕೆ ಮತ್ತು ಅರಣ್ಯ ಪದವಿ ವಿದ್ಯಾರ್ಥಿಗಳಿಗೆ ಶೇ.75 ರಷ್ಟು ಮೀಸಲಿಡಲಾಗಿತ್ತು ಮತ್ತು ನೇರ ನೇಮಕಾತಿಯಲ್ಲಿ ಶೇ.50ರಷ್ಟು ಮೀಸಲಾತಿಯನ್ನು ನಿರ್ದಿಷ್ಟ ಕೃಷಿ, ತೋಟಗಾರಿಕೆ ಮತ್ತು ಅರಣ್ಯ ವಿಭಾಗದ ಪದವಿ ಹೊಂದಿದ ವಿದ್ಯಾರ್ಥಿಗಳಿಗೆ ನೀಡಲಾಗಿತ್ತು. 2018ರ ಅಧಿಸೂಚನೆಯಲ್ಲಿ, ವಲಯ ಅರಣ್ಯಾಧಿಕಾರಿ ಹುದ್ದೆಗಳಿಗೆ ಸಹಾಯಕ ವಲಯ ಅರಣ್ಯಾಧಿಕಾರಿಗಳಾದ ಇಲಾಖಾ ಅಭ್ಯರ್ಥಿಗಳಿಗೆ ಶೇ.50ರಷ್ಟು ಮೀಸಲಾತಿಯನ್ನು ಮತ್ತು ಉಳಿದ ಶೇ.50ರಷ್ಟು ನೇರ ನೇಮಕಾತಿಯನ್ನು ಕೃಷಿ, ತೋಟಗಾರಿಕೆ ಮತ್ತು ಅರಣ್ಯ ಪದವಿ ಹೊಂದಿದ ವಿದ್ಯಾರ್ಥಿಗಳಿಗೆ ನೀಡಲಾಗಿದೆ ಎಂದು ಪ್ರತಿಭಟನಾನಿರತ ವಿದ್ಯಾರ್ಥಿಗಳು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಈ ಬಾರಿ ನ್ಯಾಯ ಸಿಗುವ ತನಕವೂ ಹೋರಾಟ ಮುಂದುವರಿಸಲು ವಿದ್ಯಾರ್ಥಿಗಳು ತೀರ್ಮಾನಿಸಿದ್ದಾರೆ. ಪ್ರತಿಭಟನೆಯಲ್ಲಿ ಕಾಲೇಜಿನ ವಿದ್ಯಾರ್ಥಿ ಪ್ರಮುಖರು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.