ಜಿಲ್ಲೆ

ಪುರಸಭಾ ಮುಖ್ಯಾಧಿಕಾರಿ ವಿರುದ್ಧ ಕ್ರಮ ವಹಿಸಿ

ಎ. ಆರ್. ರಘುರಾಮ

ಎಚ್.ಡಿ.ಕೋಟೆ : ನಿಯಮಮೀರಿ ಹರಾಜು ಪ್ರಕ್ರಿಯೆ ಮಾಡಿರುವ ಪುರಸಭಾ ಮುಖ್ಯಾಧಿಕಾರಿ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಪುರಸಭಾ ಸದಸ್ಯರು ಶುಕ್ರವಾರ ಪಟ್ಟಣದ ಪುರಸಭಾ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.

ಸುಸ್ತಿದಾರರಿಗೆ ಹರಾಜು ನೀಡದಂತೆ ನಿಯಮಾವಳಿ ಮಾಡಿದ್ದರೂ ಅದನ್ನು ಗಾಳಿಗೆ ತೂರಿ, ಹರಾಜಿನಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಡುವ ಮೂಲಕ ಪುರಸಭಾ ಕಾಯ್ದೆ ಉಲ್ಲಂಘನೆ ಮಾಡಿರುವ ಮುಖ್ಯಾಧಿಕಾರಿ ಸುರೇಶ್ ವಿರುದ್ಧ ಜಿಲ್ಲಾಧಿಕಾರಿಗಳು ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಯಿತು.

ಕಳೆದ 10 ವರ್ಷಗಳಿಂದ ಒಂದೇ ಸ್ಥಳದಲ್ಲಿ ಇದ್ದು, ಹಲವು ಅಕ್ರಮಗಳಿಗೆ ಕಾರಣವಾಗಿರುವ ಸುರೇಶ್ ಅವರು ಮಾಡಿರುವ ಅವ್ಯವಹಾರಗಳಿಗೆ ಜಿಲ್ಲಾ ಮತ್ತು ರಾಜ್ಯ ಮಟ್ಟದ ಅಧಿಕಾರಿಗಳ ಗಮನಕ್ಕೆ ಹಲವು ಬಾರಿ ಲಿಖಿತ ದೂರು ಸಲ್ಲಿಸಲಾಗಿದೆ. ಸೂಕ್ತ ದಾಖಲಾತಿಗಳನ್ನೂ ನೀಡಲಾಗಿದೆ. ಆದರೂ ಇವುಗಳಿಗೆ ಸೊಪ್ಪು ಹಾಕದೆ ಪುರಸಭಾ ಸದಸ್ಯರೇ ತಪ್ಪು ಮಾಡಿರುವ ರೀತಿಯಲ್ಲಿ ಉನ್ನತ ಮಟ್ಟದ ಅಧಿಕಾರಿಗಳಿಗೆ ತಮ್ಮನ್ನು ತಾವು ಬಿಂಬಿಸಿಕೊಂಡಿದ್ದಾರೆ. ಇಂಥವರಿಗೆ ಅಧೀನ ಸಿಬ್ಬಂದಿಯೂ ಸಹಕಾರ ನೀಡಿ, ಅವರಿಗೆ ಬೆನ್ನೆಲುಬಾಗಿ ನಿಂತಿರುವುದು ಸಂವಿಧಾನ ವಿರೋಧಿ ನಡೆ ಎಂದು ಖಂಡಿಸಲಾಯಿತು.

ಪುರಸಭಾ ಸದಸ್ಯ ಮಿಲ್ ನಾಗರಾಜು ಮಾತನಾಡಿ ಪುರಸಭಾ ಕಂದಾಯ ಅಧಿಕಾರಿಯೂ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ ಎಂದು ದೂರಿದರು.ಮತ್ತೊಬ್ಬ ಪುರಸಭಾ ಸದಸ್ಯ ಐಡಿಯಾ ವೆಂಕಟೇಶ್ ಮಾತನಾಡಿ, ಪುರಸಭಾ ಕಾರ್ಯಾಲಯಕ್ಕೆ ಬುಕ್ ಸರಬರಾಜು ಮಾಡಲಾಗಿದೆ ಎಂದು ಮುಖ್ಯಾಧಿಕಾರಿ ಸುರೇಶ್ ಅವರು ಕಬ್ಬಿಣದ ಅಂಗಡಿಗೆ ಬಿಲ್ ಪಾವತಿ ಮಾಡಿಸಿದ್ದಾರೆ. ಅಷ್ಟರಮಟ್ಟಿಗೆ ಅಕ್ರಮ ನಡೆಯುತ್ತಿದ್ದರೂ ಈ ಬಗ್ಗೆ ಧ್ವನಿ ಎತ್ತಿದವರ ಬಾಯಿ ಮುಚ್ಚಿಸುವ ಕೆಲಸ ನಡೆಯುತ್ತಿದೆ ಎಂದು ಆರೋಪಿಸಿದರು.

ಪುರಸಭಾ ಸದಸ್ಯ ನಂಜಪ್ಪ, ಪುಟ್ಟಮಾದು, ಚೌಡಹಳ್ಳಿ ಜವರಯ್ಯ, ಅನುಷಾ, ಉದಯಕೋಟೆ, ಮಹೇಶ್, ಚಲುವರಾಜು, ಸೋಮಣ್ಣ, ಫರೀದಮ್ಮ, ಶಾಹಿರಾ ಬಾನು, ಗೀತಾ, ಜೈರಾಮ್, ರಘು, ಮಂಜುನಾಥ್, ರವಿಕುಮಾರ್, ಸುಮಂತ್, ನಾಗರಾಜು, ದಿನೇಶ್, ಕುಮಾರ ಇದ್ದರು.