ಜಿಲ್ಲೆ

ಫಲಕಗಳಲ್ಲಿ ಕನ್ನಡ ಪ್ರಾಧಾನ್ಯತೆಗೆ ಆಗ್ರಹ

ಡಿ.ವಿ. ಕಮ್ಮಾರ

ಬೆಳಗಾವಿ: ಮಹಾನಗರ ಪಾಲಿಕೆ ವ್ಯಾಪ್ತಿಯ ಫಲಕಗಳಲ್ಲಿ ಶೇ.60ರ ಕನ್ನಡ ಭಾಷೆ ಕಡ್ಡಾಯ ಪಾಲನೆಯಾಗುತ್ತಿಲ್ಲ. ಪಾಲಿಕೆಯ ಅಧೀನದ ಫಲಕಗಳಲ್ಲಿಯೇ ಕನ್ನಡಕ್ಕೆ ಪ್ರಾಮುಖ್ಯತೆ ಕೊಡುತ್ತಿಲ್ಲ. ಇದನ್ನು ಸರಿಪಡಿಸಬೇಕು ಎಂದು ಆಗ್ರಹಿಸಿ ಸರ್ವೋದಯ ಸ್ವಯಂ ಸೇವಾ ಸಂಘದಿಂದ ನಗರದಲ್ಲಿ ಬುಧವಾರ ಪ್ರತಿಭಟಿಸಲಾಯಿತು.
ಪಾಲಿಕೆಯ ವಿವಿಧ ಬಡಾವಣೆ, ಸ್ಥಳ, ಉದ್ಯಾನಗಳಲ್ಲಿ ಕನ್ನಡ ಕಡೆಗಣಿಸಲಾದ ಫಲಕಗಳ ಫೋಟೋಗಳನ್ನು ಪ್ರದರ್ಶಿಸುವ ಮೂಲಕ ಚನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ರ‌್ಯಾಲಿ ನಡೆಸಿ ಬಳಿಕ ಡಿಸಿ ಮೊಹಮ್ಮದ್ ರೋಷನ್‌ರಿಗೆ ಮನವಿ ಸಲ್ಲಿಸಿದರು.
ಕಳೆದ ವರ್ಷ ನವೆಂಬರ 1ರಂದು ಫಲಕಗಳಲ್ಲಿ ಶೇ. 60ರಷ್ಟು ಕನ್ನಡ ಇರಬೇಕೆಂದು ಇಲಾಖೆಗಳಿಗೆ ಸರ್ಕಾರ ಆದೇಶ ಹೊರಡಿಸಿದ್ದಾಗ, ಪಾಲಿಕೆ ಎಲ್ಲ ವ್ಯಾಪಾರಿಗಳಿಗೆ ಸೂಚನೆ ನೀಡಿತ್ತು. ಇದನ್ನು ಪಾಲಿಸಿರುವ ವ್ಯಾಪಾರಿಗಳು, ಅಂಗಡಿಕಾರರು ಈಗಾಗಲೇ ತಮ್ಮ ಫಲಕಗಳಲ್ಲಿ ಕನ್ನಡಕ್ಕೆ ಪ್ರಾಮುಖ್ಯತೆ ನೀಡಿದ್ದಾರೆ. ಆದರೆ ಪಾಲಿಕೆ ವ್ಯಾಪ್ತಿಯ ರಸ್ತೆ, ಬಡಾವಣೆ, ಉದ್ಯಾನ, ವೃತ್ತ, ಸರ್ಕಾರಿ ಕಚೇರಿಗಳ ಮಾರ್ಗಸೂಚಿ ಫಲಕ, ಪೌರ ಕಾಮಿರ್ಕರ ವಸತಿ ಗೃಹ, ರೈಲ್ವೆ ಮೇಲ್ಸೇತುವೆಗಳ ಫಲಕಗಳಲ್ಲಿ ಮಾತ್ರ ಶೇ.60ರ ಕನ್ನಡ ಕಡ್ಡಾಯ ಪಾಲನೆಯಾಗಿಲ್ಲ. ಇದನ್ನು ಕೂಡಲೇ ಸರಿಪಡಿಸಬೇಕು. ಇಲ್ಲದೇ ಹೋದಲ್ಲಿ ಉಗ್ರ ಹೋರಾಟ ಮಾಡುವುದಾಗಿ ಮನವಿಯಲ್ಲಿ ಎಚ್ಚರಿಸಿದ್ದಾರೆ.
ಶ್ರೀನಿವಾಸ ತಾಳೂಕರ, ಮಲ್ಲಪ್ಪ ಸೊಂಟಕ್ಕಿ, ಪ್ರಕಾಶ ಶಿರೋಳಕರ, ಹನಮಂತ ಬುಚಡಿ, ಆನಂದ ಲೋಕರಿ, ಉದಯ ವಾಗೂಕರ, ಸಿದ್ದಪ್ಪ ಸುಗಂಧಿ, ಬಸವರಾಜ ಕಾಮಕರ, ಗುರುರಾಜ ಕಳ್ಳಿಮನಿ, ರವಿ ತಾವರಿ, ಗಜಾನನ ಬಾವನ್ನವರ, ಜಗದೀಶ ಗೋಣೀ, ರಾಜು ಮ್ಯಾಗೋಟಿ, ವಿಶಾಲ ಕವಡಿ ಇತರರಿದ್ದರು.