ಜಿಲ್ಲೆ

ಸೇತುವೆ ಕಾಮಗಾರಿ ವಿಳಂಬ ಖಂಡಿಸಿ ಪ್ರತಿಭಟನೆ

ಸುನಿಲ್ ಪೊನ್ನೇಟಿ

ಮಡಿಕೇರಿ:

ಜಿಲ್ಲೆಯ ಪ್ರಮುಖ ಪ್ರವಾಸಿ ತಾಣ ಕುಶಾಲನಗರ ತಾಲೂಕು ಹಾರಂಗಿ ಜಲಾಶಯಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಸೇತುವೆ ಕಾಮಗಾರಿ ವಿಳಂಬ ಖಂಡಿಸಿ ಮಂಗಳವಾರ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಕೂಡಿಗೆ - ಹುಲಗುಂದ ಮಾರ್ಗದ ಹೆದ್ದಾರಿಯಲ್ಲಿನ ಸೇತುವೆ ನಿರ್ಮಾಣ ಕಾಮಗಾರಿ ಆರಂಭಗೊAಡು ವರ್ಷ ಕಳೆದರೂ ಕೂಡ ಪೂರ್ಣಗೊಳ್ಳದ ಕಾರಣ ಈ ರಸ್ತೆಯಲ್ಲಿ ಸಂಚಾರ ವ್ಯವಸ್ಥೆ ಅಸ್ತವ್ಯಸ್ಥಗೊಂಡಿದೆ ಎಂದು ಆರೋಪಿಸಿದ ಪ್ರತಿಭಟನಾಕಾರರು ಕುಶಾಲನಗರದ ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಅಭಿಯಂತರರ ಕಚೇರಿ ಬಳಿ ಪ್ರತಿಭಟನೆ ನಡೆಸಿದರು.

ಕೂಡುಮಂಗಳೂರು ಗ್ರಾ.ಪಂ. ಅಧ್ಯಕ್ಷ ಭಾಸ್ಕರನಾಯಕ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಸಾರ್ವಜನಿಕರು, ಸಕಾಲದಲ್ಲಿ ಕಾಮಗಾರಿ ಪೂರ್ಣಗೊಳಿಸದ ಅಧಿಕಾರಿ ಹಾಗೂ ಗುತ್ತಿಗೆದಾರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇಲಾಖಾಧಿಕಾರಿಗಳು ಕಾಮಗಾರಿಯನ್ನು ಸೂಕ್ತ ಕಾಲದಲ್ಲಿ ಪರಿಶೀಲಸದ ಕಾರಣ ಗುತ್ತಿಗೆದಾರರು ಆಮೆ ಗತಿಯಲ್ಲಿ ಕಾಮಗಾರಿ ನರ್ವಹಿಸುತ್ತಿದ್ದಾರೆ. ಇದರಿಂದಾಗಿ ಹುಲಗುಂದ ಮಾರ್ಗವಾಗಿ ಸಂಚರಿಸುವ ಯಡವನಾಡು, ಹಾರಂಗಿ, ಅತ್ತೂರು ಮೊದಲಾದ ಗ್ರಾಮಗಳ ರೈತರು, ಶಾಲಾ ಕಾಲೇಜು ವಿದ್ಯಾರ್ಥಿಗಳ ಸಂಚಾರಕ್ಕೆ ಅನಾನುಕೂಲ ಆಗುತ್ತಿದೆ.

ಹಾರಂಗಿ ಜಲಾಶಯ ಹಾಗೂ ಜಲಾಶಯದ ಬಲ ಬದಿಯಲ್ಲಿನ ಅರಣ್ಯ ಇಲಾಖೆಯ ಸಾಕಾನೆ ಶಿಬಿರಕ್ಕೆ ದೂರದ ನಗರಗಳಿಂದ ಆಗಮಿಸುವ ಪ್ರವಾಸಿಗರಿಗೂ ಸಮಸ್ಯೆ ಆಗುತ್ತಿದೆ. ಈಗಾಗಲೇ ಪ್ರವಾಸಿ ವಾಹನಗಳು ಅಪಘಾತಕ್ಕೆ ತುತ್ತಾಗಿ ಸಾಕಷ್ಟು ಕಷ್ಟ ನಷ್ಟ ಅನುಭವಿಸಿ ಕೊಡಗು ಜಿಲ್ಲಾಡಳಿತಕ್ಕೆ ಹಿಡಿಶಾಪ ಹಾಕಿ ತೆರಳುವಂಥ ಪರಿಸ್ಥಿತಿ ಉಂಟಾಗಿದೆ ಎಂದು ಪಂಚಾಯಿತಿ ಭಾಸ್ಕರ ನಾಯಕ್ ಹೇಳಿದರು.

ಕೂಡಲೇ ಕಾವೇರಿ ನೀರಾವರಿ ನಿಗಮದ ಮುಖ್ಯ ಅಭಿಯಂತರರು ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿಯನ್ನು ಪರಿಶೀಲಿಸಿ ಆದಷ್ಟು ಬೇಗನೆ ಕಾಮಗಾರಿ ಪೂರ್ಣಗೊಳಿಸಿ ಸಾರ್ವಜನಿಕರ ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಈ ಸಂದರ್ಭ ಕಚೇರಿಯಲ್ಲಿ ಉಪಸ್ಥಿತರಿದ್ದ ಇಲಾಖೆಯ ಸಹಾಯಕ ಅಭಿಯಂತರರಾದ ಸೌಮ್ಯಾ ಮತ್ತಿತರ ಅಧಿಕಾರಿಗಳು ಪ್ರತಿಭಟನಾಕಾರರ ಮನವಿ ಆಲಿಸಿ ಈ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಕ್ರಮ ಜರುಗಿಸುವುದಾಗಿ ಹೇಳಿದರು. ಇದಕ್ಕೂ ಮೊದಲು ಸೇತುವೆ ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ಬಾಳೆ ಗಿಡ ನೆಟ್ಟು ಪ್ರತಿಭಟನೆ ನಡೆಸಲಾಯಿತು.

ಗ್ರಾಮ ಪಂಚಾಯಿತಿ ಸದಸ್ಯ ಮಣಿಕಂಠ, ಗ್ರಾಮಸ್ಥರಾದ ರಾಜು, ನಾಗೇಂದ್ರ, ಅಯ್ಯಪ್ಪ, ಸಜನ್, ಗಿರೀಶ್, ರಾಮು, ರೋಷನ್, ಅಜ್ಜು ಹಾಗೂ ಗ್ರಾಮಸ್ಥರು ಇದ್ದರು.