ಜಿಲ್ಲೆ

ಆನಡ್ಕ ಸರ್ಕಾರಿ ಶಾಲೆ ಮುಂದೆ ಪ್ರತಿಭಟನೆ

ಸೌಮ್ಯ ಆರ್

ಪುತ್ತೂರು ಗ್ರಾಮಾಂತರ: ಶಾಂತಿಗೋಡು ಗ್ರಾಮದ ಆನಡ್ಕ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಶಿಕ್ಷಕಿಯನ್ನು ಶಿಕ್ಷಣ ಇಲಾಖೆ ಹೆಚ್ಚುವರಿಯಾಗಿ ಗುರುತಿಸಿ ವರ್ಗಾವಣೆಗೆ ಆದೇಶಿದ್ದು, ಇದಕ್ಕೆ ಎಸ್‌ಡಿಎಂಸಿ ಮತ್ತು ಮಕ್ಕಳ ಪಾಲಕರಿಂದ ಶಿಕ್ಷಕಿಯ ವರ್ಗಾವಣೆಗೆ ವಿರೋಧ ವ್ಯಕ್ತವಾಗಿದೆ.

ಆನಡ್ಕ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 72 ವಿದ್ಯಾರ್ಥಿಗಳು ಕಲಿಯುತ್ತಿದ್ದು, ನಾಲ್ವರು ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಪೈಕಿ ಆಂಗ್ಲ ಭಾಷಾ ಶಿಕ್ಷಕಿ ಮಾಲತಿಗೆ ವರ್ಗಾವಣೆ ಆದೇಶ ಖಂಡಿಸಿ ಶನಿವಾರ ಮಕ್ಕಳನ್ನು ಶಾಲೆಗೆ ಕಳುಹಿಸದೆ ಪಾಲಕರು ಪ್ರತಿಭಟನೆ ನಡೆಸಿದ್ದಾರೆ.

ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸದೆ ಶಾಲೆ ಬಳಿ ಸೇರಿದ ಎಸ್‌ಡಿಪಿಸಿ ಪದಾಧಿಕಾರಿಗಳು ಮತ್ತು ಪಾಲಕ ನಮಗೆ ಮಾಲತಿ ಶಿಕ್ಷಕಿಯೇ ಬೇಕು. ಇಲ್ಲದಿದ್ದರೆ ನಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ. ಶಾಲೆಯಲ್ಲಿ ಇಬ್ಬರು ಶಿಕ್ಷಕರ ಕೊರತೆ ಇರುವುದರಿಂದ ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ಯಾವುದೇ ಶಿಕ್ಷಕರನ್ನು ವರ್ಗಾವಣೆ ಮಾಡಬಾರದು ಎಂದು ಪಟ್ಟು ಹಿಡಿದರು.

ಪ್ರತಿಭಟನೆಗೆ ಶಾಲಾ ಹಿರಿಯ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಬೆಂಬಲ ವ್ಯಕ್ತಪಡಿಸಿದರು. ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದ ನರಿಮೊಗರು ಕ್ಲಸ್ಟರ್ ಸಿಆರ್‌ಪಿ ಪರಮೇಶ್ವರಿ, ಸಮಸ್ಯೆ ಬಗೆಹರಿಸುವಲ್ಲಿ ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು.

ನರಿಮೊಗರು ಗಾಪಂ ಸದಸ್ಯ ದಿನೇಶ್ ಮಜಲು, ಎಸ್‌ಡಿಎಂಸಿ ಅಧ್ಯಕ್ಷ ಹರೀಶ್ ಬಿರ್ಮನಕಜೆ, ಉಪಾಧ್ಯಕ್ಷೆ ಸುಜಾತಾ, ಹಳೇ ವಿದ್ಯಾರ್ಥಿ ಸಂಘ ಅಧ್ಯಕ್ಷ ಸುರೇಶ್ ಮತ್ತಿತರರು ಭಾಗವಹಿಸಿದ್ದರು. ಎಸ್‌ಡಿಎಂಸಿ ಸಮನ್ವಯ ವೇದಿಕೆ ಜಿಲ್ಲಾ ಉಪಾಧ್ಯಕ್ಷ ಪ್ರವೀಣ್ ಆಚಾರ್ಯ ನರಿಮೊಗರು, ಸಮಿತಿ ಸದಸ್ಯೆ ಸೀತಾ ಶಾಲೆಗೆ ಭೇಟಿ ನೀಡಿ ಶಾಸಕರಿಗೆ ಮತ್ತು ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿಗೆ ಕರೆ ಮಾಡಿ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿಕೊಂಡರು.