ಹೊಳೆನರಸೀಪುರ ಪಟ್ಟಣದಲ್ಲಿ ಕರ್ನಾಟಕ ಅಸ್ಪೃಶ್ಯ ಅಲೆಮಾರಿ ಸಮುದಾಯಗಳ ಮಹಾ ಒಕ್ಕೂಟ ಸೋಮವಾರ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿತು. 
ಜಿಲ್ಲೆ

ಒಳಮೀಸಲಾತಿಯಲ್ಲಿ ಅನ್ಯಾಯ ಖಂಡಿಸಿ ಪ್ರತಿಭಟನೆ

ನಾಗೇಶ ಎಸ್

ಹೊಳೆನರಸೀಪುರ: ಅಲೆಮಾರಿಗಳಂತಹ ಧ್ವನಿ ಇಲ್ಲದ ಸಮುದಾಯಗಳ ವಿಷಯದಲ್ಲಿ ಸರ್ಕಾರವು ಮಲತಾಯಿ ಧೋರಣೆ ತಾಳಿದೆ ಎಂದು ಆರೋಪಿಸಿ ಕರ್ನಾಟಕ ಅಸ್ಪೃಶ್ಯ ಅಲೆಮಾರಿ ಸಮುದಾಯಗಳ ಮಹಾ ಒಕ್ಕೂಟ ಸೋಮವಾರ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿತು.

ತಾಲೂಕು ಪಂಚಾಯಿತಿ ಮುಂಭಾಗದಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಮೂಲಕ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಅಂಬೇಡ್ಕರ್ ಪ್ರತಿಮೆ ಹಾಗೂ ಮಹಾತ್ಮ ಗಾಂಧೀಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಉಪ ತಹಸೀಲ್ದಾರ್ ಶಿವಕುಮಾರ್ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಕರ್ನಾಟಕ ಅಸ್ಪೃಶ್ಯ ಅಲಮಾರಿ ಸಮುದಾಯಗಳ ಮಹಾ ಒಕ್ಕೂಟದ ತಾಲೂಕು ಕಾರ್ಯದರ್ಶಿ ಬಲರಾಮ್ ಮಾತನಾಡಿ, ರಾಜ್ಯದ ಅಲಮಾರಿ ಸಮುದಾಯಗಳಿಗೆ ಒಳಮೀಸಲಾತಿಯಲ್ಲಿ ಅನ್ಯಾಯವಾಗಿದ್ದು, ಈ ಸಮುದಾಯಗಳನ್ನು ಪ್ರತ್ಯೇಕವಾಗಿ ಗುರುತಿಸಿ ಶೇ.1ರಷ್ಟು ಮೀಸಲಾತಿ ಜಾರಿಗೆ ತರಬೇಕೆಂದು ಒತ್ತಾಯಿಸಿದರು.

ರಾಜ್ಯ ಸರ್ಕಾರ ಈಗಾಗಲೇ ಮೀಸಲಾತಿಯ ಒಳವರ್ಗೀಕರಣಕ್ಕೆ ಸಂಬಂಧಿಸಿದಂತೆ ಆದೇಶ ಹೊರಡಿಸಿದೆ. ಸರ್ಕಾರದ ಈ ಆದೇಶವು ಸರ್ವೋಚ್ಚ ನ್ಯಾಯಾಲಯವು ಮೀಸಲಾತಿಯ ಒಳವರ್ಗೀಕರಣದ ಕುರಿತು ನೀಡಿದ ಮಹತ್ವದ ತೀರ್ಪಿಗೆ ವಿರುದ್ಧವಾಗಿದೆ. ಸರ್ವೋಚ್ಚ ನ್ಯಾಯಾಲಯವು ಈ ಹಿಂದೆ ಮೀಸಲಾತಿಯ ಒಳವರ್ಗೀಕರಣದ ಬಗ್ಗೆ ಮಹತ್ವದ ತೀರ್ಪನ್ನು ನೀಡಿತ್ತು. ಕಳೆದ 75 ವರ್ಷಗಳಲ್ಲಿ ಮೀಸಲಾತಿಯ ಮೂಲಕ ಸೂಕ್ತ ಪ್ರಾತಿನಿಧ್ಯ ಪಡೆಯದ ಅಲೆಮಾರಿ ಸಮುದಾಯಗಳಲ್ಲಿ ಈ ತೀರ್ಪು ಹೊಸ ಭರವಸೆಯನ್ನು ಮೂಡಿಸಿತ್ತು ಎಂದರು.

ಅಲೆಮಾರಿ ಬುಡಕಟ್ಟು ಮಹಾ ಸಭಾದ ಜಿಲ್ಲಾ ಕಾರ್ಯದರ್ಶಿ ಗೋಪನಹಳ್ಳಿ ಮಂಜು ಮಾತನಾಡಿ, ಕಳೆದ 75 ವರ್ಷಗಳಲ್ಲಿ ಪರಿಶಿಷ್ಟ ಜಾತಿಗಳಲ್ಲಿ ಯಾವ ಸಮುದಾಯಗಳಿಗೆ ಸಾಕಷ್ಟು ಪ್ರಾತಿನಿಧ್ಯ ಸಿಕ್ಕಿಲ್ಲವೋ ಅಂತಹ ಸಮುದಾಯಗಳಿಗೆ ಹೆಚ್ಚಿನ ಅವಕಾಶಗಳು ಲಭ್ಯವಾಗುವಂತಾಗಬೇಕು. ಪರಿಶಿಷ್ಟ ಸಮುದಾಯಗಳ ವಿವಿಧ ಗುಂಪುಗಳಿಗೆ ಮೀಸಲಾತಿ ಪ್ರಮಾಣವನ್ನು ನಿಗದಿ ಮಾಡುವ ಸಂದರ್ಭದಲ್ಲಿ ಆಯಾ ಸಮುದಾಯಗಳ ಸಾಮಾಜಿಕ ಮತ್ತು ಶೈಕ್ಷಣಿಕ ಹಿಂದುಳಿದಿರುವಿಕೆಯೇ ಮುಖ್ಯ ಮಾನದಂಡವಾಗಬೇಕು ಎಂಬ ಅಂಶಗಳನ್ನು ಸುಪ್ರೀಂಕೋರ್ಟ್ ತನ್ನ ತೀರ್ಪಿನಲ್ಲಿ ಉಲ್ಲೇಖಿಸಿದೆ. ಇದಕ್ಕೆ ಪೂರಕವಾಗಿ ನ್ಯಾಯಮೂರ್ತಿ ಸದಾಶಿವ ನೇತೃತ್ವದ ಆಯೋಗವು ನೀಡಿದ ವರದಿಯಲ್ಲಿ ಕರ್ನಾಟಕದ 49 ಅಲೆಮಾರಿ ಸಮುದಾಯಗಳು ಕಳೆದ 75 ವರ್ಷಗಳಲ್ಲಿ ಮೀಸಲಾತಿಯನ್ನು ಒಳಗೊಂಡಂತೆ ಸರ್ಕಾರದ ಅಭಿವೃದ್ಧಿ ಯೋಜನೆಗಳಲ್ಲಿ ಎಷ್ಟು ಪಾಲನ್ನು ಕಳೆದುಕೊಂಡಿವೆ ಎಂಬುದನ್ನು ಎಳೆಎಳೆಯಾಗಿ ಬಿಡಿಸಿಟ್ಟಿವೆ ಎಂದು ತಿಳಿಸಿದರು.

ನಂದೀಶ ವೈಆರ್, ಮಂಜು, ಲಕ್ಷ್ಮಣ, ಸೋಮಶೇಖರ, ರಾಮಚಂದ್ರ, ಗಂಗಣ್ಣ, ನಾಗರಾಜ, ತಿಮ್ಮರಾಜು ಮತ್ತಿತರರಿದ್ದರು.