ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಶ್ರೀ ಕ್ಷೇತ್ರ ಧರ್ಮಸ್ಥಳದ ಮಂಜುನಾಥ ಸ್ವಾಮಿ ದೇವಾಲಯ ಹಾಗೂ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ವಿರುದ್ಧ ಅಪಪ್ರಚಾರ ನಡೆಯುತ್ತಿದೆ. ಕಾಣದ ಕೈಗಳು ಕ್ಷೇತ್ರದ ಹೆಸರಿಗೆ ಕಳಂಕ ತರುವ ಪಿತೂರಿ ನಡೆಸಿವೆ ಎಂದು ರಾಜ್ಯಾದ್ಯಂತ ಕ್ಷೇತ್ರದ ಸಾವಿರಾರು ಭಕ್ತರು ಪ್ರತಿಭಟನೆ ನಡೆಸಿದರು.
ಈಗಾಗಲೇ ಕೊಡಗು, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ಧಾರವಾಡ, ಮಂಡ್ಯಗಳಲ್ಲಿ ಲಕ್ಷಾಂತರ ಭಕ್ತರು ಬೀದಿಗಿಳಿದು ತಮ್ಮ ಆಕ್ರೋಶ ಹೊರಹಾಕಿದ್ದು, ಜನಾಗ್ರಹದ ಕಾವು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.
ಭಾನುವಾರ ಚಿಕ್ಕಬಳ್ಳಾಪುರ, ಚಿತ್ರದುರ್ಗ, ಹಾವೇರಿ, ರಾಯಚೂರು, ಹಾಸನ, ಬೀದರ್‌ನಲ್ಲೂ ಅಭಿಮಾನಿಗಳು ಬೀದಿಗಿಳಿದಿದ್ದಾರೆ. ಕೇವಲ ಒಬ್ಬ ಅನಾಮಿಕ ವ್ಯಕ್ತಿ ಕೊಟ್ಟ ದೂರಿನ ಮೇರೆಗೆ ಸರ್ಕಾರ ಎಸ್‌ಐಟಿ ರಚನೆ ಮಾಡಿತು. ಆದರೆ ಅದನ್ನು ನಾವು ಗೌರವಿಸುತ್ತೇವೆ. ಎಸ್‌ಐಟಿ ತನಿಖಾಧಿಕಾರಿ ಮೇಲೆ ನಮಗೆ ನಂಬಿಕೆ ಹಾಗೂ ಗೌರವವಿದೆ. ಆದರೆ ಇದೀಗ ಅನಾಮಿಕ ವ್ಯಕ್ತಿ ತೋರಿಸಿದ ಎಲ್ಲ ಸ್ಥಳಗಳಲ್ಲೂ ಗುಂಡಿ ತೆಗೆದು ಶೋಧನೆ ಆದ ನಂತರವೂ ಈ ಪ್ರಕ್ರಿಯೆಗಳಿಗೆ ಕೊನೆ ಇಲ್ಲ. ಇದು ನಮಗೆ ಗೊಂದಲ ಮೂಡಿಸುತ್ತಿದೆ. ಈ ಷಡ್ಯಂತ್ರವನ್ನು ನಡೆಸುತ್ತಿರುವವರು ಶ್ರೀ ಧರ್ಮಸ್ಥಳದ ತೇಜೋವಧೆ ಮಾಡುತ್ತಾ ಹೋಗುವುದು ಭಕ್ತರಾದ ನಮಗೆ ಸಹಿಸಲು ಸಾಧ್ಯವಿಲ್ಲ. ತಕ್ಷಣ ಸರ್ಕಾರ ಈ ಎಸ್‌ಐಟಿ ತನಿಖೆಗೆ ನಿರ್ದಿಷ್ಟ ಅವಧಿ ನೀಡಿ ಆ ಅವಧಿಯೊಳಗೆ ತನಿಖೆ ಮುಗಿದು ಸರ್ಕಾರಕ್ಕೆ ವರದಿ ನೀಡಲಿ. ಆದಷ್ಟು ಬೇಗ ಸತ್ಯಾಂಶ ಹೊರಬರಲಿ.
ಕ್ಷೇತ್ರದ ಮೇಲೆ ಕಳಂಕ ತರುವ ತಪ್ಪಿತಸ್ಥರ ವಿರುದ್ಧ ಕೂಡಲೇ ಕಾನೂನು ಕ್ರಮ ಕೈಗೊಳ್ಳಬೇಕೆಂಬ ಮನವಿಯನ್ನು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಸಲ್ಲಿಸಿದರು. ಈ ಹೋರಾಟದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಭಕ್ತರಲ್ಲದೆ ಧರ್ಮಸ್ಥಳದಿಂದ ಸಮಾಜಕ್ಕೆ ಆಗಿರುವ ಪ್ರಯೋಜನಗಳನ್ನು ಗೌರವಿಸಿ ಅನೇಕ ಅಭಿಮಾನಿಗಳು ಈ ಹೋರಾಟಕ್ಕೆ ಬೆಂಬಲ ನೀಡಿದ್ದಾರೆ. ಜಾತಿ, ಮತ, ಧರ್ಮ, ಭೇದವಿಲ್ಲದೆ ಎಲ್ಲ ವರ್ಗದ ಜನರು ಕೂಡಿಕೊಂಡು ಶ್ರೀ ಕ್ಷೇತ್ರ ಧರ್ಮಸ್ಥಳ ವಿರುದ್ಧ ಅಪಪ್ರಚಾರ ಮಾಡುತ್ತಿರುವವರನ್ನು ಬಂಧಿಸಬೇಕೆಂಬ ಆಗ್ರಹ ವ್ಯಕ್ತವಾಗಿದೆ. ಕೆಲವೆಡೆ ಪಾದಯಾತ್ರೆ, ಮಾನವ ಸರಪಳಿಗಳ ಮೂಲಕ ಪ್ರತಿಭಟನೆ ನಡೆಯಿತು.