ಜಿಲ್ಲೆ

ಒಳಮೀಸಲಾತಿ ಜಾರಿಗೆ ಅರೆಬೆತ್ತಲೆ ಮೆರವಣಿಗೆ

ಶಿವರಾಜ.ಎಂ

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ

ಒಳಮೀಸಲಾತಿ ಜಾರಿಗೆ ಆಗ್ರಹಿಸಿ ಕರ್ನಾಟಕ ಮಾದಿಗ ಸಂಘಟನೆಗಳ ಒಕ್ಕೂಟದಿಂದ ಗ್ರಾಮಾಂತರ ಜಿಲ್ಲೆಯ ನಾಲ್ಕೂ ತಾಲೂಕಿನಿಂದ ಅಗಮಿಸಿದ್ದ ಸಾವಿರಾರು ಪ್ರತಿಭಟನಕಾರರು ಶುಕ್ರವಾರ ಚಪ್ಪರದಕಲ್ಲು ಗ್ರಾಮದಿಂದ ದೇವನಹಳ್ಳಿ ಜಿಲ್ಲಾಡಳಿತ ಭವನದವರೆಗೂ ಅರೆಬೆತ್ತಲೆ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಸರ್ಕಾರದ ನಡೆಗೆ ಖಂಡನೆ:

ಸರ್ಕಾರ ಕೂಡಲೇ ಒಳಮೀಸಲಾತಿ ಜಾರಿಗೆ ಮುಂದಾಗಬೇಕು ಎಂದು ರಾಜ್ಯ ಮಾದಿಗ ದಂಡೋರದ ಅಧ್ಯಕ್ಷ ಎಂ.ಶಂಕರಪ್ಪಆಗ್ರಹಿಸಿದರು. ಕಳೆದ ಆಗಸ್ಟ್ 1 ರ ಸುಪ್ರೀಂಕೋರ್ಟ್‌ನ ತೀರ್ಪಿನಂತೆ ಶೀಘ್ರ ಒಳ ಮೀಸಲಾತಿ ಜಾರಿಗೊಳಿಸಬೇಕು ಎಂದು ರಾಜ್ಯಾದ್ಯಂತ 31 ಜಿಲ್ಲೆಗಳಲ್ಲಿ ಅರೆಬೆತ್ತಲೆ ಮೆರವಣಿಗೆ ಹಾಗೂ ಧರಣಿ ಮಾಡಲಾಗುತ್ತಿದೆ. ಕೋಟ್ಯಂತರ ರೂಗಳನ್ನು ಖರ್ಚು ಮಾಡಿ ಅನೇಕ ವರ್ಷಗಳ ಹೋರಾಟದ ಪ್ರತಿಫಲವಾಗಿ ಸುಪ್ರೀಂಕೋರ್ಟ್‌ನಿಂದ ಒಳ ಮೀಸಲಾತಿ ಜಾರಿಗೆ ಆಯಾ ರಾಜ್ಯಗಳಿಗೆ ಅಧಿಕಾರ ನೀಡಿದ್ದು, ಅದನ್ನು ಜಾರಿ ತರಲು ಕಾಂಗ್ರೆಸ್ ಸರ್ಕಾರ ಮೀನಮೇಷ ಎಣಿಸುತ್ತಿರುವುದನ್ನು ಮಾದಿಗ ಸಮುದಾಯ ಖಂಡಿಸುತ್ತದೆ ಎಂದರು.

ಸಾಮಾನತೆಗಾಗಿ ಹೋರಾಟ:

ದಂಡೋರದ ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷ ಬುಳ್ಳಳ್ಳಿ ರಾಜಪ್ಪ, ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದ ಮುಂದೆ ಒಳಮೀಸಲಾತಿಗಾಗಿ ಆಗ್ರಹಿಸಿ ಅರೆಬೆತ್ತಲೆ ಮೆರವಣಿಗೆ ಹಾಗೂ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಜಿಲ್ಲೆಯ ನಾಲ್ಕು ತಾಲೂಕಿನ ಮಾದಿಗ ಸಮುದಾಯದವರು ಭಾಗವಹಿಸಿ ಸಮಾನತೆ ಮತ್ತು ಸಾಮಾಜಿಕ ನ್ಯಾಯ ಒದಗಿಸುವಂತೆ ಆಗ್ರಹಿಸಿ ಸರ್ಕಾರಕ್ಕೆ ಎಚ್ಚರಿಕೆ ನೀಡುತ್ತಿದ್ದೇವೆ ಎಂದು ತಿಳಿಸಿದರು. ನೆರೆಯ ಆಂದ್ರ ಸೇರಿ ದೇಶದ ಹಲವು ರಾಜ್ಯಗಳು ಈಗಾಗಲೇ ಸರ್ವೋಚ್ಚ ನ್ಯಾಯಾಲಯದ ತೀರ್ಪಿನಂತೆ ಒಳ ಮೀಸಲಾತಿ ಜಾರಿಗೊಳಿಸಿವೆ ಆದರೆ ನಮ್ಮ ರಾಜ್ಯ ಸರ್ಕಾರ ಜಾಣ ಕುರುಡು ಜಾಣ ಕಿವುಡು ನೀತಿ ಅನುಸರಿಸುತ್ತಾ ದಿನ ಕಳೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ನೊಂದು ಸಾವಿರಾರು ಸಂಖ್ಯೆಯಲ್ಲಿ ಮಾದಿಗ ಸಮುದಾಯ ಭಾಗಿಯಾಗಿ ಹೋರಾಟಕ್ಕೆ ಸಹಕಾರ ನೀಡಿದ್ದಾರೆ, ಜನಪದ ಕಲಾವಿದರಿಂದ ಕ್ರಾಂತಿ ಗೀತೆಗಳನ್ನ ಹಾಡುವ ಮೂಲಕ ಮೀಸಲಾತಿ ಹೋರಾಟಕ್ಕೆ ಕಳೆ ತರಲಾಯಿತು ಎಂದರು.

ಸಿಎಂಗೆ ಮನವಿ:

ಕಾಂಗ್ರೆಸ್ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಬಾಯಿ ಬಡಿದುಕೊಂಡು ಒಳ ಮೀಸಲಾತಿ ಜಾರಿಗೆ ಆಗ್ರಹಿಸಿದರು. ಪ್ರತಿಭಟನೆ ಬಳಿಕ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು.