ಪಟ್ಟಣದ ತಾಲೂಕು ಕಚೇರಿ ಮುಂಭಾಗ 45ನೇ ರೈತ ಹುತಾತ್ಮರ ದಿನಾಚರಣೆ ಅಂಗವಾಗಿ ಕರ್ನಾಟಕ ರಾಜ್ಯ ರೈತ ಸಂಘ ತಾಲೂಕು ಶಾಖೆಯ ಪದಾಧಿಕಾರಿಗಳು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ತಹಸೀಲ್ದಾರ್ ಬಸವರಾಜು ಅವರಿಗೆ ಮನವಿ ಸಲ್ಲಿಸಿದರು. ಶಿವಮಲ್ಲೇಗೌಡ, ಭಾಸ್ಕರ್,ರವಿನಾಯ್ಡು, ನಾಗರಾಜು, ಜಯರಾಜು, ರಾಜಣ್ಣ, ಮಾದೇವ, ಪುಟ್ಟೇಗೌಡ, ನಿಕೋಲಿಸ್, ಚಾರ್ಲಿ, ಮಹೇಶ್, ಅಶೋಕ ಕುಮಾರ್ ಹಾಗೂ ಇತರರು ಇದ್ದರು. 
ಜಿಲ್ಲೆ

ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ವಾಪಸ್ ಪಡೆಯಿರಿ

ನಾಗೇಶ ಎಸ್

ಕೊಳ್ಳೇಗಾಲ: ರೈತ ಹುತಾತ್ಮರ ದಿನಾಚರಣೆ ಅಂಗವಾಗಿ ಸೋಮವಾರ ಕರ್ನಾಟಕ ರಾಜ್ಯ ರೈತ ಸಂಘ ತಾಲೂಕು ಶಾಖೆಯ ಪದಾಧಿಕಾರಿಗಳ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.

ಪಟ್ಟಣದ ಎಪಿಎಂಸಿ ಆವರಣದಲ್ಲಿ ಜಮಾಯಿಸಿದ್ದ ರೈತರು ಮೆರವಣಿಗೆ ಮೂಲಕ ತಾಲೂಕು ಕಚೇರಿಗೆ ತೆರಳಿ ತಹಸೀಲ್ದಾರ್ ಬಸವರಾಜು ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ದೇವನಹಳ್ಳಿ ತಾಲೂಕು ಚನ್ನರಾಯ ಪಟ್ಟಣದ 1,777 ಎಕರೆ ಭೂ ಸ್ವಾಧೀನವನ್ನು ಕೈಬಿಡಲಾಗಿದೆ ಇದನ್ನು ಕೂಡಲೇ ಗೆಜೆಟ್ ಮೂಲಕ ಹೊರಡಿಸಬೇಕು. ಮಾತಿನಂತೆ ಭೂ ಸುಧಾರಣೆ ತಿದ್ದುಪಡಿ ಕಾಯ್ದೆಯನ್ನು ಮುಂಬರುವ ಅಧಿವೇಶನದಲ್ಲಿ ವಾಪಸ್ ಪಡೆಯಬೇಕು. ಎಪಿಎಂಸಿ ಕಾಯ್ದೆಯನ್ನು ಮತ್ತಷ್ಟು ರೈತ ಪರ ಗಟ್ಟಿಗೊಳಿಸಬೇಕು. ಕೇಂದ್ರ ನ್ಯಾಷನಲ್ ಕೃಷಿ ಮಾರುಕಟ್ಟೆ ಫ್ರೇಮ್ ವರ್ಕ್ ನೀತಿಯನ್ನು ತಿರಸ್ಕರಿಸಬೇಕು. ವಿದ್ಯುತ್ ಖಾಸಗೀಕರಣವನ್ನು ರಾಜ್ಯದಲ್ಲಿ ಜಾರಿಗೆ ತರಬಾರದು. ಕಾರ್ಮಿಕ ತಿದ್ದುಪಡಿ ಕೋಡ್‌ಗಳನ್ನು ರಾಜ್ಯದಲ್ಲಿ ಜಾರಿಗೆ ತರಬಾರದು. ರಸಗೊಬ್ಬರ ಕೊರತೆಯನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿ ಸಲ್ಲಿಸಿದರು.

ಬಳಿಕ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಗೌಡೇಗೌಡ ಮಾತನಾಡಿ, ರೈತರ ಹುತಾತ್ಮರ ದಿನವನ್ನು ದೇವನಹಳ್ಳಿ ತಾಲೂಕು ಚೆನ್ನರಾಯ ಪಟ್ಟಣದ 13 ಹಳ್ಳಿ ಭೂ ಸುಧಾರಣೆ ರದ್ದು ಪಡಿಸಿರುವ ರಾಜ್ಯ ಸರ್ಕಾರದ ನಡೆಯಿಂದ ರೈತರಿಗೆ ಜಯ ದೊರೆತಿದೆ. ಈ ಜಯವನ್ನು ಹುತಾತ್ಮರ ರೈತರಿಗೆ ಸಮರ್ಪಿಸುತ್ತೇವೆ ಎಂದರು.

ಈ ಸಂದರ್ಭದಲ್ಲಿ ರೈತ ಸಂಘದ ತಾಲೂಕು ಅಧ್ಯಕ್ಷ ಶಿವಮಲ್ಲೇಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭಾಸ್ಕರ್, ಜಿಲ್ಲಾ ಖಾಯಂ ಸದಸ್ಯರಾದ ರವಿನಾಯ್ಡು, ನಾಗರಾಜು, ಜಯರಾಜು, ರಾಜಣ್ಣ, ಮಾದೇವ, ಪುಟ್ಟೇಗೌಡ, ನಿಕೋಲಿಸ್, ಚಾರ್ಲಿ, ಮಹೇಶ್, ಅಶೋಕ ಕುಮಾರ್ ಹಾಗೂ ಇತರರು ಇದ್ದರು.