ಗುಂಡ್ಲುಪೇಟೆ ತಾಲೂಕಿನ ಹೊಸಪುರ ಗ್ರಾಮದಲ್ಲಿ ಬೆಳೆಹಾನಿ ಮಹಜರು ಮಾಡಲು ಬಂದಿದ್ದ ಅರಣ್ಯ ಸಿಬ್ಬಂದಿಗೆ ಗ್ರಾಮಸ್ಥರು ದಿಗ್ಬಂಧನ ಹಾಕಿದ್ದಾರೆ. 
ಜಿಲ್ಲೆ

ಮಹಜರಿಗೆ ಬಂದ ಅರಣ್ಯ ಸಿಬ್ಬಂದಿಗೆ ದಿಗ್ಬಂಧನ

ನಾಗೇಶ ಎಸ್

ಗುಂಡ್ಲುಪೇಟೆ: ನಿರಂತರವಾಗಿ ದಾಳಿ ನಡೆಸುತ್ತಿರುವ ಆನೆಗಳನ್ನು ತಡೆಗಟ್ಟಲು ವಿಫಲವಾದ ಅರಣ್ಯ ಇಲಾಖೆ ವಿರುದ್ಧ ಆಕ್ರೋಶಗೊಂಡ ಹೊಸಪುರ ಗ್ರಾಮಸ್ಥರು ಬೆಳೆನಾಶ ಮಹಜರಿಗೆ ಬಂದಿದ್ದ ಸಿಬ್ಬಂದಿಗೆ ದಿಗ್ಬಂಧನ ಹಾಕಿದರು.

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಓಂಕಾರ್ ವಲಯದ ಕಾಡಂಚಿನ ಗ್ರಾಮಕ್ಕೆ ಪ್ರತಿ ದಿನವೂ ಆನೆಗಳು ಬಂದು ಬೆಳೆ ನಾಶ ಮಾಡುತ್ತಿದ್ದರೂ ಇದನ್ನು ತಡೆಗಟ್ಟಲು ಅರಣ್ಯ ಇಲಾಖೆ ವಿಫಲವಾಗಿದೆ. ಆನೆಗಳು ಬಂದಿರುವ ಬಗ್ಗೆ ಮಾಹಿತಿ ನೀಡಿದರೂ ಓಂಕಾರ್ ವಲಯದ ಸಿಬ್ಬಂದಿ ಇತ್ತ ತಲೆ ಹಾಕುತ್ತಿಲ್ಲ. ಇದರಿಂದ ರೈತರು ಸಾಲಸೋಲ ಮಾಡಿ ಬೆಳೆದ ಬೆಳೆಗಳು ಕಾಡುಪ್ರಾಣಿಗಳ ಪಾಲಾಗುತ್ತಿದ್ದು ಜೀವನೋಪಾಯಕ್ಕೆ ಸಮಸ್ಯೆಯಾಗುತ್ತಿದೆ. ಆದ್ದರಿಂದ ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ಮಹಜರು ನಡೆಸಲು ಬಂದಿದ್ದ ಇಬ್ಬರು ಗಾರ್ಡ್‌ಗಳಿಗೆ ದಿಗ್ಬಂಧನ ವಿಧಿಸಿ ತಮ್ಮ ಜತೆ ಕೂರಿಸಿಕೊಂಡಿದ್ದರು.

ವಿಷಯ ತಿಳಿದ ಫಾರೆಸ್ಟರ್ ಶಶಿಕುರ್ ಸ್ಥಳಕ್ಕೆ ಆಗಮಿಸಿ ಇಂದು ಕಚೇರಿಗೆ ಅರಣ್ಯಾಧಿಕಾರಿ ಹೊಸದಾಗಿ ಬಂದಿದ್ದು ಅವರನ್ನು ನಾಳೆ ಗ್ರಾಮಕ್ಕೆ ಕರೆತರಲಾಗುವುದು. ಅಲ್ಲದೆ ಆನೆಗಳು ಕಾಡಿನಿಂದ ಹೊರ ಬರುವುದನ್ನು ತಪ್ಪಿಸಲು ನಾಳೆಯಿಂದಲೇ ಕಂದಕಗಳ ಹೂಳೆತ್ತಿಸುವ ಕಾಮಗಾರಿ ಆರಂಭಿಸಲಾಗುವುದು ಎಂದು ಭರವಸೆ ನೀಡಿದರು. ನಂತರ ಗ್ರಾಮಸ್ಥರು ಸಿಬ್ಬಂದಿಯನ್ನು ಬಿಟ್ಟು ಕಳಿಸಲಾಯಿತು.

ಈ ಸಂದರ್ಭದಲ್ಲಿ ಶಿವರುದ್ರಪ್ಪ, ಮಹದೇವೇಗೌಡ, ಬೆಳ್ಳೇಗೌಡ ಮುಂತಾದವರು ಇದ್ದರು.