ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಆನೇಕಲ್ ತಾಲೂಕಿನಲ್ಲಿ ವಿವಿಧ ಕಾರಣಗಳಿಂದ ಭೂಸ್ವಾಧೀನ ಹೆಚ್ಚಾಗಿದೆ. ಈಗ ಮತ್ತೆ ಕೈಗಾರಿಕೆಗಳ ಕಾರಣದಿಂದಾಗಿ ಕೃಷಿ ಭೂಮಿ ಸ್ವಾಧೀನ ಮಾಡಿಕೊಳ್ಳುತ್ತಿರುವ ಕ್ರಮ ಖಂಡನೀಯ. ರೈತರ ವಿಶ್ವಾಸ ಪಡೆದು ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಶಾಸಕ ಬಿ.ಶಿವಣ್ಣ ಒತ್ತಾಯಿಸಿದರು.
ಬೆಂಗಳೂರಿನ ಫ್ರೀಡಂಪಾರ್ಕ್‌ನಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು. ಪದೆ ಪದೇ ಭೂಸ್ವಾಧೀನದಿಂದ ಇಲ್ಲಿನ ರೈತರು ಹೈರಾಣಾಗಿದ್ದಾರೆ. ಈ ಕ್ರಮ ಸರಿಯಲ್ಲ ಎಂದು ವಿರೋಧ ವ್ಯಕ್ತಪಡಿಸಿದರು.
ವಿಧಾನ ಪರಿಷತ್ ಸದಸ್ಯ ಎಚ್.ಎಸ್.ಗೋಪಿನಾಥರೆಡ್ಡಿ ಮಾತನಾಡಿ, ಆನೇಕಲ್ ತಾಲೂಕಿನಲ್ಲಿರುವ ಐದು ಕೈಗಾರಿಕಾ ಪ್ರದೇಶಗಳಲ್ಲಿಯೇ ಸರಿಯಾದ ಮೂಲಸೌಲಭ್ಯ ನೀಡುತ್ತಿಲ್ಲ. ಹೀಗಿರುವಾಗ ಮತ್ತೊಂದು ಕೈಗಾರಿಕಾ ಪ್ರದೇಶ ಸ್ಥಾಪಿಸುವಲ್ಲಿ ಅರ್ಥವಿಲ್ಲ. ಬೆಂಗಳೂರು ನೂರು ಕಿ.ಮೀ. ವ್ಯಾಪ್ತಿಯಲ್ಲಿ ಆನೇಕಲ್ ತಾಲೂಕು ಹೊರತುಪಡಿಸಿ ಹಲವಾರು ಸ್ಥಳಗಳಿವೆ. ಈ ಬಗ್ಗೆ ಸರ್ಕಾರ ಮರುಪರಿಶೀಲನೆ ನಡೆಸಬೇಕು ಎಂದರು.
ರಾಗಿಯ ಕಣಜವಾಗಿರುವ ಆನೇಕಲ್ ತಾಲೂಕಿನ ರೈತರು ಬೆಳೆಯುವ ಹಣ್ಣುಗಳು ಮತ್ತು ತರಕಾರಿಗಳು ಬಹುತೇಕವಾಗಿ ಬೆಂಗಳೂರಿನ ಅರ್ಧದಷ್ಟು ಜನರಿಗೆ ತಲುಪುತ್ತಿದೆ. ಆದರೆ ತರಕಾರಿ ಮತ್ತು ಹಣ್ಣು ಸೇರಿ ರಾಗಿ, ರೇಷ್ಮೆ, ಹೂ ಬೆಳೆಯುವ ರೈತರ ಜಮೀನ ಕಸಿದುಕೊಂಡರೆ ಹೇಗೆ? ಸರ್ಕಾರ ಕೂಡಲೇ ಕೆಐಎಡಿಬಿ ಸ್ವಾಧೀನ ಕೈ ಬಿಡಬೇಕು ಎಂದು ಬಮುಲ್ ನಿರ್ದೇಶಕ ಆರ್.ಕೆ.ರಮೇಶ್ ಒತ್ತಾಯಿಸಿದರು. ತಾಲೂಕಿನಲ್ಲಿ ಈಗಾಗಲೇ ಅತ್ತಿಬೆಲೆ ಕೈಗಾರಿಕಾ ಪ್ರದೇಶ, ಬೊಮ್ಮಸಂದ್ರ, ಜಿಗಣಿ, ಎಲೆಕ್ಟ್ರಾನಿಕ್ ಸಿಟಿ, ವೀರಸಂದ್ರ ಕೈಗಾರಿಕಾ ಪ್ರದೇಶಗಳು ಸ್ಥಾಪನೆಯಾಗಿದೆ ಮತ್ತು ಸೂರ್ಯ ಸಿಟಿ ಒಂದರಿಂದ ನಾಲ್ಕನೇ ಹಂತದವರೆಗೆ ಆನೇಕಲ್ ತಾಲೂಕಿನಲ್ಲಿ ನಿರ್ಮಾಣವಾಗುತ್ತಿದೆ ಇನ್ನು ಉಳಿದ ಅಲ್ಪಸ್ವಲ್ಪ ಭೂಮಿ ಸರ್ಜಾಪುರ ಭಾಗದಲ್ಲಿತ್ತು ಆದರೆ ಈ ಭೂಮಿಗೆ ಈಗ ಮತ್ತೆ ವಶಪಡಿಸಿಕೊಳ್ಳಲು ಮುಂದಾಗಿರುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಎಲ್ಲಿಂದಲೋ ಬಂದವರಿಗೆ ಮಣೆ: ತಾಲೂಕಿನಲ್ಲಿರುವ ಕೈಗಾರಿಕೆಗಳಲ್ಲಿ ನಮ್ಮ ತಾಲೂಕಿನ ಯುವಕರಿಗೆ ಕೆಲಸಗಳನ್ನು ನೀಡುವಲ್ಲಿ ಕೈಗಾರಿಕೆಗಳು ಮುಂದಾಗುತ್ತಿಲ್ಲ ಬದಲಾಗಿ ಕೈಗಾರಿಕೆಗಳಲ್ಲಿ ಶುಚಿತ್ವದ ಕೆಲಸಕ್ಕೆ ಮಾತ್ರ ನೇಮಕಾತಿ ಮಾಡಿಕೊಳ್ಳುತ್ತಿರುವುದು ವಿಪರ್ಯಾಸ ಎಂದು ರಾಷ್ಟ್ರೀಯ ಯುವ ಪ್ರಶಸ್ತಿ ವಿಜೇತ ಮತ್ತು ಹೋರಾಟಗಾರ ಡಾ. ಚಿನ್ನಪ್ಪ ವೈ ಚಿಕ್ಕಹಾಗಡೆ ಬೇಸರ ವ್ಯಕ್ತಪಡಿಸಿದರು. ರೈತರ ಭೂಮಿಯನ್ನು ಪಡೆದ ಸರ್ಕಾರ ಸೂರ್ಯ ಸಿಟಿ ಹೆಸರಿನಲ್ಲಿ ನಿವೇಶನಗಳನ್ನು ಮಾಡಿ ರೈತರಿಗೆ ನೀಡದೆ ಎಲ್ಲಿಂದಲೋ ಬಂದವರಿಗೆ ನೀಡುತ್ತಿದ್ದಾರೆ ಈಗಾಗಲೇ ರೈತರು ಸಾಕಷ್ಟು ಬಾರಿ ವ್ಯಕ್ತಪಡಿಸಿದರೂ ವ್ಯಕ್ತಪಡಿಸಿದರು ಸರ್ಕಾರ ಕಿಂಚಿತ್ತು ಕರುಣೆ ತೋರುತ್ತಿಲ್ಲ ಎಂದರು.