ಕೋಲಾರ: ಭೂ ಸುಧಾರಣಾ, ವಿದ್ಯುತ್, ಕಾರ್ಮಿಕ, ಎಪಿಎಂಸಿ ಕಾಯ್ದೆ ತಿದ್ದುಪಡಿ ಸುಗ್ರೀವಾಜ್ಞೆ ವಾಪಸ್‌ಗೆ ಒತ್ತಾಯಿಸಿ ರೈತ ಸಂಘದ ಮುಖಂಡರು ನಗರದ ಮೆಕ್ಕೆ ವೃತ್ತದಲ್ಲಿ ಮಡಕೆಗಳನ್ನು ಬೋರಲು ಹಿಡಿದು ಶುಕ್ರವಾರ ರಸ್ತೆ ತಡೆ ನಡೆಸಿದರು.
ಉಪಾದ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, ನೂತನ ಕಾಯ್ದೆ ರೈತ ವಿರೋಧಿಯಾಗಿದೆ. ಯಾವುದೇ ಚರ್ಚೆಯಿಲ್ಲದೆ ಏಕಾಏಕಿ ಕಾಯ್ದೆ ಜಾರಿಗೆ ಮುಂದಾಗಿರುವುದನ್ನು ನೋಡಿದರೆ ಕಾರ್ಪೋರೇಟ್ ಕಂಪನಿಗಳ ಪರ ಸರ್ಕಾರಗಳಿವೆ ಎಂಬುದನ್ನು ಸಾಬೀತುಪಡಿಸಿದಂತಾಗಿದೆ. ಕೃಷಿ ಜಮೀನಿನ ಮೇಲೆ ಕಪ್ಪು ಹಣ ಹೂಡಿಕೆಯಾಗಲಿದೆ. ರೈತರ ಹೆಸರಿನಲ್ಲಿ ಬಂಡವಾಳಶಾಹಿಗಳಿಗೆ, ಕಾರ್ಮಿಕರ ನೆಪದಲ್ಲಿ ಕೈಗಾರಿಕೋದ್ಯಮಗಳಿಗೆ ಸರ್ಕಾರ ಪರೋಕ್ಷವಾಗಿ ಸಹಾಯ ಮಾಡುತ್ತಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಆರೋಪಿಸಿದರು.
ಜಿಲ್ಲಾಧ್ಯಕ್ಷೆ ಎ.ನಳಿನಿಗೌಡ ಮಾತನಾಡಿ, ಸರ್ಕಾರಗಳು ರೈತ ಮತ್ತು ಕಾರ್ಮಿಕ ವಿರೋಧಿ ಕಾಯ್ದೆ ಜಾರಿ ಮಾಡಿ ರೈತರು ಮತ್ತು ಕಾರ್ಮಿಕರನ್ನು ಒಕ್ಕಲೆಬ್ಬಿಸುವ ಕೆಲಸ ಮಾಡುತ್ತಿವೆ. ರೈತ ವಿರೋಧಿ ಕಾಯ್ದೆ ಕೈಬಿಡಬೇಕು, ಇಲ್ಲವಾದಲ್ಲಿ ಸೆ. 28ರಂದು ಬಂದ್ ಜತೆಗೆ ಬೃಹತ್ ಹೋರಾಟ ನಡೆಸಬೇಕಾಗುತ್ತದೆಂದು ಎಚ್ಚರಿಸಿದರು.
ತಾಲೂಕು ಅಧ್ಯಕ್ಷ ಈಕಂಬಳ್ಳಿ ಮಂಜುನಾಥ್, ಬಂಗಾರಪೇಟೆ ಅಧ್ಯಕ್ಷ ಐತಾಂಡಹಳ್ಳಿ ಮಂಜುನಾಥ್, ಮುಖಂಡರಾದ ನಾರಾಯಣಪ್ಪ ಹೊಳಲಿ, ಬಂಗವಾದಿ ನಾಗರಾಜಗೌಡ, ನಳಿನಿ.ವಿ ಲೋಕೇಶ್, ಮಂಗಸಂದ್ರ ತಿಮ್ಮಣ್ಣ, ವೆಂಕಟೇಶಪ್ಪ, ಸಹದೇವಣ್ಣ, ವೆಂಕಟೇಶಪ್ಪ, ರಂಜಿತ್, ಸುಪ್ರೀಂಚಲ, ನಾರಾಯಣ ಇತರರು ಪಾಲ್ಗೊಂಡಿದ್ದರು.
ಎಪಿಎಂಸಿ ಕಾಯ್ದೆ ತಿದ್ದುಪಡಿಯಿಂದ ಬಹುರಾಷ್ಟ್ರೀಯ ಕಂಪನಿಗಳು ಮಾರುಕಟ್ಟೆಗೆ ಬರುವಂತಾಗಿದ್ದು, ಎಪಿಎಂಸಿ ಆಸ್ತಿಯನ್ನು ಬಹುರಾಷ್ಟ್ರೀಯ ಕಂಪನಿಗಳು ಹಾಗೂ ಸ್ಥಳೀಯ ಬಂಡವಾಳಶಾಹಿಗಳಿಗೆ ಹಂಚುವ ಹುನ್ನಾರ ನಡೆಸಲಾಗುತ್ತಿದೆ. ದೇಶದ ಬಡ ಜನರಿಗೆ ಬೆಳಕು ಸಿಗಲಿ ಎಂದು ಭಾಗ್ಯಜ್ಯೋತಿ, ಕುಟೀರ ಜ್ಯೋತಿ ಯೋಜನೆ ತರಲಾಗಿತ್ತು. ಈ ಯೋಜನೆಗಳು ಇನ್ನು ಮುಂದೆ ಇರುವುದಿಲ್ಲ. ಕೆ.ನಾರಾಯಣಗೌಡ, ರೈತ ಸಂಘ ಉಪಾಧ್ಯಕ್ಷ