ಚಿತ್ರದುರ್ಗ: ಕೇಂದ್ರ,ರಾಜ್ಯ ಸರ್ಕಾರಗಳ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ದೇಶಾದ್ಯಂತ ಕರೆ ನೀಡಿದ್ದ ಸಾರ್ವತ್ರಿಕ ಮುಷ್ಕರದ ಹಿನ್ನೆಲೆಯಲ್ಲಿ ಚಿತ್ರದುರ್ಗದಲ್ಲಿ ಬುಧವಾರ ಕಾರ್ಮಿಕ ಸಂಘಟನೆಗಳು ಮತ್ತು ಸಂಯುಕ್ತ ಹೋರಾಟ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ಆಶಾ, ಅಂಗನವಾಡಿ, ಬಿಸಿಯೂಟ, ಕಾರ್ಮಿಕರ ಸಹಿತ ಹಲವು ಸಂಘಟನೆಗಳ ಸದಸ್ಯರು, ಕಾರ್ಯಕರ್ತರಿದ್ದ ಪ್ರತಿಭಟನಾ ಮೆರವಣಿಗೆ ನಗರದ ಯೂನಿಯನ್ ಪಾರ್ಕ್‌ನಿಂದ ಆರಂಭವಾಗಿ ಪ್ರಮುಖ ರಸ್ತೆ ಮೂಲಕ ಸಾಗಿ ಮಹಾವೀರವೃತ್ತ,ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ಮೂಲಕ ಒನಕೆ ಓಬವ್ವ ವೃತ್ತದಲ್ಲಿ ಸಮಾವೇಶಗೊಂಡಿತು.
ಸರ್ವೋದಯ ಕರ್ನಾಟಕ ಪಕ್ಷದ ಜಿಲ್ಲಾಧ್ಯಕ್ಷ ಜೆ. ಯಾದವರೆಡ್ಡಿ ಮಾತನಾಡಿ, ಅಂಗನವಾಡಿ ಕಾರ್ಯಕರ್ತೆಯರ ಶ್ರಮಕ್ಕೆ ತಕ್ಕಂತೆ ವೇತನ ವಿಲ್ಲ. ಆತ್ಮ ಗೌರವದಿಂದ ಬದುಕಲು ಕನಿಷ್ಠ ವೇತನದೊಂದಿಗೆ ಸೇವೆ ಕಾಯಂಗೊಳಿಸುವಂತೆ ಗುಜರಾತ್ ಹೈಕೋರ್ಟ್ ತೀರ್ಪುನೀಡಿದೆ. ಆದ್ದರಿಂದ ಎಲ್ಲ ರಾಜ್ಯಗಳ ಅಂಗನವಾಡಿ ಕಾರ್ಯಕರ್ತೆಯರ ಸೇವೆ ಕಾಯಂಗೊಳಿಸಿ ಜೀವನ ಭದ್ರತೆ ಒದಗಿಸಬೇಕೆಂದು ಒತ್ತಾಯಿಸಿದರು.
ದೇವನಹಳ್ಳಿಯಲ್ಲಿ ರೈತರು ಜಮೀನು ಉಳಿಸಿಕೊಳ್ಳಲು ಹೋರಾಟ ನಡೆಸುತ್ತಿರುವುದರ ವಿರುದ್ಧ ಸಚಿವ ಎಂ.ಬಿ. ಪಾಟೀಲ್ ವ್ಯಕ್ತಪಡಿಸಿರುವ ಅಸಮಾಧಾನದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು, ರಾಜ್ಯ ಸರ್ಕಾರ ಭೂ ಸ್ವಾಧೀನದಿಂದ ಹಿಂದೆ ಸರಿಯದಿದ್ದರೆ ಹೋರಾಟ ತೀವ್ರವಾಗಲಿದೆ ಎಂದು ಎಚ್ಚರಿಕೆ ನೀಡಿದರು.
ಸಿಪಿಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಸಿ. ಸುರೇಶ್‌ಬಾಬು ಮಾತನಾಡಿ, ಮೂರನೇ ಅವಧಿಗೆ ಅಧಿಕಾರಕ್ಕೆ ಬಂದಿರುವ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕೃಷಿ ಮತ್ತು ಕಾರ್ಮಿಕರ ಕಾಯ್ದೆಗಳನ್ನು ತಿದ್ದುಪಡಿಗೊಳಿಸುವ ಮೂಲಕ ಅಂಗನವಾಡಿ ಕಾರ್ಯಕರ್ತೆಯರ, ಜನ ಸಾಮಾನ್ಯರ, ದುಡಿಯುವ ವರ್ಗದ ಜನರ, ರೈತರ ಹಾಗೂ ಕಾರ್ಮಿಕರ ಹಕ್ಕನ್ನು ಕಸಿದುಕೊಳ್ಳುತ್ತಿದೆ ಎಂದು ಆರೋಪಿಸಿದರು.
ಅಗತ್ಯ ವಸ್ತುಗಳ ಬೆಲೆಗಳನ್ನು ಏರಿಸಿ ಜನಸಾಮಾನ್ಯರನ್ನು ತತ್ತರಿಸುವಂತೆ ಮಾಡಿದೆ. ಉದ್ಯಮಿಗಳು, ಕಾರ್ಪೊರೇಟ್ ಕಂಪನಿಗಳ ಪರವಾಗಿ ನಿಲ್ಲಬಾರದೆಂದ ಅವರು, ಸರ್ಕಾರಗಳ ಕಾರ್ಮಿಕ ವಿರೋಧಿ, ಕಾರ್ಪೋರೇಟ್ ಪರ ನೀತಿಗಳನ್ನು ಕಟುವಾಗಿ ಟೀಕಿಸಿದರು.
ರಾಜ್ಯರೈತ ಸಂಘದ ಕಾರ್ಯಾಧ್ಯಕ್ಷ ಈಚಘಟ್ಟದ ಸಿದ್ದವೀರಪ್ಪ ಮಾತನಾಡಿ, ಆಂಧ್ರಪ್ರದೇಶದಲ್ಲಿ 900 ರೂ. ಗಳಿಗೆ ಸ್ಮಾರ್ಟ್ ಮೀಟರ್ ಸಿಗುತ್ತದೆ. ಅದರೆ, ಕರ್ನಾಟಕದಲ್ಲಿ 10 ಸಾವಿರ ರೂ.ಗಳಿಗೆ ಸ್ಮಾರ್ಟ್ ಮೀಟರ್‌ಗಳನ್ನು ಅಳವಡಿಸಲಾಗುತ್ತಿದೆ. ಸ್ಮಾರ್ಟ್ ಮೀಟರ್ ಹಾಕಲು ಮನೆ ಬಾಗಿಲಿಗೆ ಬರುವವರನ್ನು ಓಡಿಸಬೇಕಿದೆ ಎಂದರು.
ಗುಲಾಮಗಿರಿಗೆ ತಳ್ಳುವ 4 ಕಾರ್ಮಿಕ ಸಂಹಿತೆಗಳನ್ನು ರದ್ದುಗೊಳಿಸಬೇಕು. ಭಾರತೀಯ ಕಾರ್ಮಿಕ ಸಮ್ಮೇಳನವನ್ನು ತಕ್ಷಣವೇ ಕರೆಯ ಬೇಕು. ಸಾರ್ವಜನಿಕ ಸೇವಾ ವಲಯಗಳ ಖಾಸಗೀಕರಣ ನಿಲ್ಲಿಸಬೇಕು. ಅಂಗನವಾಡಿ, ಆಶಾ ಮತ್ತು ಬಿಸಿಯೂಟ ಕಾರ್ಯಕರ್ತೆಯರು, ಕಾರ್ಮಿಕರ ವಿವಿಧ ಬೇಡಿಕೆಗಳು, 8ನೇ ವೇತನ ಆಯೋಗ ರಚನೆ, ಹೊರಗುತ್ತಿಗೆ, ಗುತ್ತಿಗೆ ಪದ್ಧತಿ ಸ್ಥಗಿತ ಸಹಿತ ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪ್ರಭಾರ ಎಡಿಸಿ ಮಹೇಶ್ ಅವರಿಗೆ ಮನವಿ ಸಲ್ಲಿಸಿದರು.
ಎಪಿಎಂಸಿ ಹಮಾಲರ ಸಂಘದ ಜಿಲ್ಲಾಧ್ಯಕ್ಷ ಬಿ. ಬಸವರಾಜ್, ಭಾಗ್ಯಮ್ಮ, ತಿಪ್ಪಮ್ಮ, ಜಮುನಾಬಾಯಿ, ವಿನೋದಮ್ಮ, ಗಿರಿಜಮ್ಮ, ಮಂಜುಳಾ, ಗುರುಶಾಂತ, ನಾಗವೇಣಿ ಹಾಗೂ ಟಿ.ಆರ್. ಉಮಾಪತಿ, ಕುಮಾರ್ ಸಮತಳ, ರವಿಕುಮಾರ್, ಕುಮುದಾ, ಕೆ.ಇ. ಸತ್ಯಕೀರ್ತಿ, ಡಿ.ಎಸ್.ಹಳ್ಳಿ ಮಲ್ಲಿಕಾರ್ಜುನ್, ಗೌಸ್‌ಪೀರ್, ಬಸ್ತಿಹಳ್ಳಿ ಸುರೇಶ್‌ಬಾಬು, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ ಸೇರಿದಂತೆ ರೈತ, ಕಾರ್ಮಿಕ, ಆಶಾ, ಅಂಗನವಾಡಿ, ಬಿಸಿಯೂಟ ಸಂಘಟನೆಗಳು, ನಾನಾ ಕಾರ್ಮಿಕರ ಸಂಘಟನೆಗಳ ಪ್ರಮುಖರು ಪ್ರತಿಭಟನೆಯಲ್ಲಿದ್ದರು.
ನೂರಾರು ಕಾರ್ಮಿಕರ ಬಂಧನ, ಬಿಡುಗಡೆ
ಚಳ್ಳಕೆರೆ: ಕೇಂದ್ರ ಸರ್ಕಾರದ ಕಾರ್ಮಿಕರ ವಿರೋಧಿ ನೀತಿಗಳನ್ನು ವಿರೋಧಿಸಿ ನಗರದಲ್ಲಿ ಬುಧವಾರ ಸಿಐಟಿಯು ಸಂಘಟನೆಯೊಂದಿಗೆ ಪ್ರತಿಭಟನೆ ನಡೆಸಿದ ನೂರಾರು ಕಾರ್ಮಿಕರನ್ನು ಬಂಧಿಸಿ ನಂತರ ಬಿಡುಗಡೆ ಮಾಡಲಾಯಿತು.
ನಗರದ ಎಪಿಎಂಸಿ ಮಾರುಕಟ್ಟೆಯಿಂದ ಹೊರಟ ಪ್ರತಿಭಟನಾ ಮೆರವಣಿಗೆ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ನೆಹರೂ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ವಾಹನಗಳ ಸಂಚಾರ ಲಡೆಯಲಾಯಿತು.
ಕೇಂದ್ರ ಸರ್ಕಾರ ಖಾಸಗಿ ಕಂಪನಿಗಳ ಸೇವಕನಂತೆ ಆಡಳಿತ ಮಾಡುತ್ತಿದೆ. ದೇಶದ 29 ಪ್ರಮುಖ ಕಾರ್ಮಿಕ ಕಾನೂನುಗಳನ್ನು 4 ಸಂಹಿತೆಗಳಲ್ಲಿ ರೂಪಿಸಲಾಗಿದೆ. ಇದರಿಂದ ಶೇ.70 ರಷ್ಟು ಕಾರ್ಮಿಕರಿಗೆ ಇನ್ನು ಮುಂದೆ ಕಾರ್ಮಿಕ ಕಾನೂನುಗಳು ಅನ್ವಯವಾಗುವುದಿಲ್ಲ. ಸಂಘ ಕಟ್ಟುವ ಹಕ್ಕು ಇರುವುದಿಲ್ಲ. ಬೇಡಿಕೆಯ ಹಕ್ಕು ಮತ್ತು ಒಪ್ಪಂದ ಏರ್ಪಡಿಸುವ ಹಕ್ಕು ಹಾಗೂ ಕಾರ್ಮಿಕರ ಸಾಮೂಹಿಕ ಮುಷ್ಕರದ ಹಕ್ಕೂ ಇರುವುದಿಲ್ಲ. ಇಂತಹ ಕಾನೂನುಗಳನ್ನು ರದ್ದುಪಡಿಸಬೇಕು ಎಂದು ಒತ್ತಾಯಿಸಿದರು.
ಕೆಲಸ ಅವಧಿ 8 ಗಂಟೆ ನಿಗದಿ ಮಾಡಬೇಕು. ಕೆಲಸಕ್ಕೆ ತಕ್ಕ ವೇತನ ನೀಡಬೇಕು. ಬೆಲೆ ಏರಿಕೆಗೆ ಅನುಗುಣವಾಗಿ ಕಾರ್ಮಿಕರಿಗೆ 36 ಸಾವಿರ ಕನಿಷ್ಠ ವೇತನ ನೀಡಬೇಕು. ಗುತ್ತಿಗೆ ಕಾರ್ಮಿಕರಿಗೆ ಸಮಾನ ಕೆಲಸ ಮತ್ತು ಸಮಾನ ವೇತನ ಜಾರಿ ಮಾಡಬೇಕು. ಕಟ್ಟಡ ಕಾರ್ಮಿಕರು, ಆಟೋ, ಟ್ಯಾಕ್ಸಿ ಚಾಲಕರು ಮತ್ತು ಮನೆ ಕೆಲಸಗಾರರು, ಬೀದಿಬದಿ ವ್ಯಾಪಾರಿ, ಟೈಲರ್ ಕಾರ್ಮಿಕರಿಗೆ ಮಾಸಿಕ 9 ಸಾವಿರ ರೂ. ಪಿಂಚಣಿ ಮತ್ತು ಸಾಮಾಜಿಕ ಭದ್ರತೆ ನೀಡಬೇಕು.
ಸರ್ಕಾರದ ಉದ್ದಿಮೆ, ನಿಗಮ ಮತ್ತು ಇಲಾಖೆಗಳನ್ನು ಖಾಸಗೀಕರಣ ಮಾಡುವುದನ್ನು ಕೈಬಿಡಬೇಕು. ಉದ್ಯೋಗವನ್ನು ಮೂಲಭೂತ ಹಕ್ಕನ್ನಾಗಿ ಘೋಷಿಸಬೇಕು. ಖಾತ್ರಿ ಯೋಜನೆ ಕಾರ್ಮಿಕರಿಗೆ ವಾರ್ಷಿಕ 200 ದಿನ ಕೆಲಸ ನೀಡಬೇಕು. ಪ್ರತಿದಿನ 600ರೂ. ಕೂಲಿ ನೀಡಬೇಕು ಎಂದು ಆಗ್ರಹಿಸಿದರು.
ಸಂಘಟನೆ ಅಧ್ಯಕ್ಷ ಟಿ. ನಿಂಗಣ್ಣ, ಕಾರ್ಯದರ್ಶಿ ಟಿ. ತಿಪ್ಪೇಸ್ವಾಮಿ, ಎಚ್.ಒ. ನಾಗರಾಜ, ಜೆ.ಎನ್. ಗಂಗಮ್ಮ, ಕೊರ‌್ಲಕುಂಟೆ ಸಿ. ಜಯಲಕ್ಷ್ಮಿ, ಸುಶೀಲಮ್ಮ, ಎಚ್. ಮಂಜುಳಾ, ಲಕ್ಷ್ಮೀದೇವಿ, ಆರ್. ರಾಧಿಕಾ, ಪುಟ್ಟಮ್ಮ, ಇ. ನಾಗರಾಜ, ದುರ್ಗಾವರ ಬೋರಯ್ಯ, ಜಿ. ಗಂಗಮ್ಮ, ಸತೀಶ್, ಚನ್ನಕೇಶವ, ಚಿತ್ತಪ್ಪ ಮತ್ತಿತರರಿದ್ದರು.