ಜಿಲ್ಲೆ

ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯ

ಶಿವರಾಜ.ಎಂ

 ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ

ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸುವ ಅತಿಥಿ ಉಪನ್ಯಾಸಕರು, ಹಲವು ಸಂಕಷ್ಟ ಎದುರಿಸುತ್ತಿದ್ದು ಅವರ ವಿವಿಧ ಬೇಡಿಕೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಈಡೇರಿಸಬೇಕು ಎಂದು ರಾಜ್ಯ ವಸತಿ ಶಾಲೆಗಳ ನೌಕರರ ಸಂಘದ ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷೆ ಸಿಬಿ.ಲಕ್ಷ್ಮೀ ಒತ್ತಾಯಿಸಿದರು.

ದೇವನಹಳ್ಳಿ ತಾಲೂಕು ಬಿರಸಂದ್ರ ಗ್ರಾಮದ ಜಿಲ್ಲಾಡಳಿತ ಕಚೇರಿ ಮುಂಭಾಗ ಸೋಮವಾರ ವಸತಿ ಶಾಲೆಗಳ ನೌಕರರ ಸಂಘದವರು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು.

ಅತಿಥಿ ಉಪನ್ಯಾಸಕರ ಹುದ್ದೆ ಕಾಯಂ ಮಾಡಬೇಕು ಮಕ್ಕಳ ಭವಿಷ್ಯ ರೂಪಿಸುವವರ ಭವಿಷ್ಯದ ಕಡೆಗೂ ಗಮನ ನೀಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.

ವಸತಿ ಶಿಕ್ಷಣ ನಿರ್ದೇಶನಾಲಯ ರಚನೆ ಮಾಡಿ ಅಥವಾ ಅಟಲ್ ಬಿಹಾರಿ ವಾಜಪೇಯಿ ಕಿತ್ತೂರಾಣಿ ಚೆನ್ನಮ್ಮ, ಸಂಖ್ಯಾತರ ವಸತಿ ಶಾಲೆಗಳನ್ನು ಸಿಬ್ಬಂದಿಗಳೊಂದಿಗೆ ಸಂಬಂಧಿಸಿದ ಇಲಾಖೆಗಳ ವಶಕ್ಕೆ ನೀಡಬೇಕು, ಕಾಯಂ ನೌಕರರಿಗೆ ಜ್ಯೋತಿ ಸಂಜೀವಿನಿ ಮತ್ತು ನಿವೃತ್ತಿ ಉಪದಾನ ಸೌಲಭ್ಯಹಾಗೂ ವಿಶೇಷ ಭತ್ಯೆ ಮಂಜೂರು ಮಾಡಬೇಕು ಎಂದು ಒತ್ತಾಯಿಸಿದರು. ಸರ್ಕಾರಿ ನೌಕರರು ಕೇವಲ 8 ತಾಸು ಕಾರ್ಯನಿರ್ವಹಿಸಿದರೆ ವಸತಿ ಶಾಲೆಯ ಅತಿಥಿ ಉಪನ್ಯಾಸಕರು ಇಪ್ಪತ್ತು ತಾಸು ಶ್ರಮಿಸುತ್ತಿದ್ದಾರೆ. ಶ್ರಮಕ್ಕೆ ಬೆಲೆ ಇಲ್ಲವೇ? ಇದಲ್ಲದರ ಸುಧಾರಣೆಯಾಗಬೇಕು ಸರ್ಕಾರ ನಮ್ಮ ಬೇಡಿಕೆಗಳನ್ನು ನಿರ್ಲಕ್ಷ್ಯ ಮಾಡಬಾರದು ಆದ್ದರಿಂದ ಹಲವು ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದ್ದೇವೆ ಎಂದರು.