ಕುಶಾಲನಗರ:
ಪಾಕಿಸ್ತಾನವನ್ನು ಭೂಪಟದಲ್ಲಿ ಇಲ್ಲದಂತೆ ಮಾಡುವ ಕೆಲಸ ಮೋದಿ ಮಾಡಬೇಕು. ಈ ನಂಬಿಕೆ ನಮಗಿದೆ ಎಂದು ಮಾಜಿ ಸಚಿವ ಎಂ.ಪಿ. ಅಪ್ಪಚ್ಚು ರಂಜನ್ ಹೇಳಿದರು. ಕಾಶ್ಮೀರದ ಪೆಹಲ್ಗಾಮ್‌ನಲ್ಲಿ ಉಗ್ರರ ದಾಳಿಯಿಂದ ಹತರಾದ ಹಿಂದುಗಳು, ಆತ್ಮಹತ್ಯೆ ಮಾಡಿಕೊಂಡ ಕೊಡಗಿನ ಹಿಂದು ಕಾರ್ಯಕರ್ತ ವಿನಯ್ ಸೋಮಯ್ಯ ಹಾಗೂ ಮಂಗಳೂರಿನಲ್ಲಿ ದುಷ್ಕರ್ಮಿಗಳಿಂದ ಕೊಲೆಗೀಡಾದ ಹಿಂದು ಕಾರ್ಯಕರ್ತ ಸುಹಾಸ್ ಶೆಟ್ಟಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲು ಮಿಷನ್ ಮೋದಿ ಡೆಮಾಕ್ರಸಿ ಡೆವಲಪ್‌ಮೆಂಟ್ ಟ್ರಸ್ಟ್ ವತಿಯಿಂದ ಕುಶಾಲನಗರದಲ್ಲಿ ಸೋಮವಾರ ಏರ್ಪಡಿಸಿದ್ದ ಮಾನವ ಸರಪಳಿ ಮತ್ತು ಮೌನ ಮೆರವಣಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಕೊಡಗಿನಲ್ಲೂ ಎಚ್ಚರಿಕೆ ವಹಿಸಬೇಕು. ಇಲ್ಲಿಯ ಪೊಲೀಸರು ಕಾಂಗ್ರೆಸ್ ಪೊಲೀಸರಾಗಿದ್ದಾರೆ. ಸರ್ಕಾರದ ಪೊಲೀಸರಾಗಿ ಉಳಿದಿಲ್ಲ. ಅಭಿವೃದ್ಧಿ ಮಾಡಿ ಎಂದು ಜಾಗೃತಿ ಮೂಡಿಸುವುದು ತಪ್ಪಲ್ಲ. ಆದರೆ ಪೊಲೀಸರು ಇಂಥವರ ಮೇಲೂ ಶಾಸಕರ ಕುಮ್ಮಕ್ಕಿನಿಂದ ಕ್ರಮ ತೆಗೆದುಕೊಳ್ಳುತ್ತಿದ್ದಾರೆ. ದೇಶ ಉಳಿದರೆ ನಾವು ಉಳಿಯುತ್ತೇವೆ. ಹಾಗಾಗಿ ದೇಶ ಮೊದಲು ಎನ್ನುವುದನ್ನು ಅರಿತುಕೊಳ್ಳಬೇಕು ಎಂದರು.
ಮಾಜಿ ಸ್ಪೀಕರ್ ಕೆ.ಜಿ. ಬೋಪಯ್ಯ ಮಾತನಾಡಿ, ಪಾಕಿಸ್ತಾನ ಪರ ಇರುವವರು ಕಾಶ್ಮೀರದಲ್ಲಿ ಗುಂಡಿನ ದಾಳಿ ನಡೆಸುವಾಗ ಜಾತಿ ಕೇಳಲಿಲ್ಲ. ಧರ್ಮ ಯಾವುದೆಂದು ಕೇಳಿದರು. ಇದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಸಮಸ್ಯೆ ಬಗ್ಗೆ ಹೇಳುವ ಹಕ್ಕು ಎಲ್ಲರ ಮೇಲಿದೆ. ಬಿಜೆಪಿ ಬೆಂಬಲಿಗ ವಿನಯ್ ಸೋಮಯ್ಯ ಮಾಡಿದ್ದೂ ಇದೆ. ಆದರೆ ಕೊಡಗಿನ ಇಬ್ಬರು ಶಾಸಕರ ಕುಮ್ಮಕ್ಕಿನಿಂದ ಇದನ್ನು ಪೊಲೀಸರು ಭಯೋತ್ಪಾದನೆ ಕೃತ್ಯದಂತೆ ಪರಿಗಣಿಸಿ ಕ್ರಮಕ್ಕೆ ಮುಂದಾದ ಕಾರಣ ವಿನಯ್ ಆತ್ಮಹತ್ಯೆ ಮಾಡಿಕೊಳ್ಳುವಂತಾಯಿತು ಎಂದು ಹೇಳಿದರು.
ನಿವೃತ್ತ ಸೇನಾಧಿಕಾರಿ ಮೇ.ಜ. ನಂದ ಮಾತನಾಡಿ, ಕೊಡಗಿನಲ್ಲಿ ಎರಡು ಪ್ರಬಲ ಜಾತಿಗಳ ನಡುವೆ ನಡೆಯುತ್ತಿರುವ ಸಂಘರ್ಷ ಒಂದು ಸಂಚಾಗಿದ್ದು, ಪ್ರಜ್ಞಾವಂತರಾಗಿರುವ ಕೊಡಗಿನವರು ಇದರ ದಾಳ ಆಗಿರುವುದು ವಿಷಾದನೀಯ. ಇತ್ತೀಚೆಗೆ ಜಿಲ್ಲೆಯ ಎರಡು ಸಮುದಾಯವನ್ನು ಕೆಲವರು ತಮ್ಮ ಲಾಭಕ್ಕಾಗಿ ಒಡೆಯುತ್ತಿದ್ದಾರೆ. ಇದನ್ನು ಅರಿತುಕೊಳ್ಳದ ಈ ಎರಡೂ ಸಮುದಾಯಗಳು ತಮ್ಮ ಬಲಾಬಲ ಪ್ರದರ್ಶನ ನಡೆಸುತ್ತಿದ್ದಾರೆ. ಇದು ಹಿಂದುಗಳನ್ನು ಒಡೆಯುವ ಸಂಚಿನ ಒಂದು ಭಾಗ ಎನ್ನುವುದನ್ನು ಪ್ರಜ್ಞಾವಂತರಾಗಿರುವ ಈ ಸಮುದಾಯದ ಜನರು ಅರಿತುಕೊಳ್ಳಬೇಕಿದೆ ಎಂದು ಹೇಳಿದರು.
ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ ಮಾತನಾಡಿದರು.
ಮಿಷನ್ ಮೋದಿ ಡೆಮಾಕ್ರಸಿ ಡೆವಲಪ್‌ಮೆಂಟ್ ಟ್ರಸ್ಟ್ ಮೈಸೂರು ಜಿಲ್ಲಾಧ್ಯಕ್ಷ ಅರುಣ, ಉಪಾಧ್ಯಕ್ಷ ಮೈಸೂರು ಗಿರೀಶ್, ಕೊಡಗು ಪ್ರಭಾರಿ ಮೈನಾ ಲೋಕೇಶ್, ಜಿಲ್ಲಾ ಸಂಚಾಲಕ ವಿಷ್ಣುನಾಚಪ್ಪ, ಸಂಘಟನಾ ಕಾರ್ಯದರ್ಶಿ ರವಿಶಂಕರ್, ಬಿಜೆಪಿ ಪ್ರಮುಖರಾದ ರವಿ ಕುಶಾಲಪ್ಪ, ಬಿ.ಬಿ. ಭಾರತೀಶ್, ಗೌತಮ್, ಲೋಕೇಶ್, ನಾಗೇಶ್ ಕುಂದಲ್ಪಾಡಿ, ಅಶ್ವಿನ್‌ಕುಮಾರ್ ಮತ್ತಿತರರು ಇದ್ದರು.