ಜಿಲ್ಲೆ

ಕಡಿಮೆ ಸಂಖ್ಯೆಯ ಪಂಗಡದ ಮೇಲೆ ದೌರ್ಜನ್ಯ - ಹಿಂದು ಮುಖಂಡ ಅರುಣ್‌ಕುಮಾರ್ ಆರೋಪ - ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದಿಂದ ಪ್ರತಿಭಟನೆ

Mangaluru - Nishantha Narayana

ಪುತ್ತೂರು: ಬ್ರಾಹ್ಮಣ ವಿದ್ಯಾರ್ಥಿಗಳು ಸಿಇಟಿ ಬರೆಯಲು ಹೋದಾಗ ಜನಿವಾರ ತೆಗೆಸಿದ ಪ್ರಕರಣಕ್ಕೆ ಸಂಬಂಽಸಿ ಪುತ್ತೂರು ಅಮರ್ ಜವಾನ್ ಜ್ಯೋತಿ ಬಳಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ, ಶ್ರೀ ರಾಮಚಂದ್ರಾಪುರ ಮಠ ಉಪ್ಪಿನಂಗಡಿ ಹವ್ಯಕ ಮಂಡಲ ವತಿಯಿಂದ ಪ್ರತಿಭಟನೆ ನಡೆಯಿತು.

ಹಿಂದು ಮುಖಂಡ ಅರುಣ್‌ಕುಮಾರ್ ಮಾತನಾಡಿ, ಜಾತಿಗಣತಿ ಬಳಿಕ ಕಡಿಮೆ ಸಂಖ್ಯೆಯಲ್ಲಿರುವ ಪಂಗಡದ ಮೇಲೆ ದೌರ್ಜನ್ಯ ನಡೆಯುತ್ತಿದೆ. ಧಾರ್ಮಿಕ ಪರಂಪರೆಯನ್ನು ಉಳಿಸುವ ಕೆಲಸವನ್ನು ಬ್ರಾಹ್ಮಣ ಸಮುದಾಯವರು ಮಾಡಿಕೊಂಡಿಬರುತ್ತಿದ್ದು, ಅವರ ಜನಿವಾವರವನ್ನು ತುಂಡರಿಸುವ ಜತೆಗೆ ಇಂತಹ ಹಲವು ಘಟನೆಯನ್ನು ನಡೆಸುವ ಸೂಚನೆಯನ್ನು ಸರ್ಕಾರಿ ಪ್ರಾಯೋಜಿತವಾಗಿ ನೀಡಿರುವುದು ಖಂಡನೀಯ. ಸಂಪ್ರದಾಯಗಳನ್ನು ವಿರೋಧಿಸುವ, ಧಾರ್ಮಿಕತೆಗೆ ಖಡಿವಾಣ ಹಾಕುವ ಕೆಲಸವನ್ನು ಸರ್ಕಾರ ಮಾಡಿದರೆ, ಮತ್ತೆ ಕೊಡಲಿ ಹಿಡಿಯತಕ್ಕ ಕೆಲಸ ಸಮುದಾಯದಿಂದ ಆಗುತ್ತದೆ ಎಂದರು.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಜಿಲ್ಲಾ ಪ್ರತಿನಿಧಿ ಮಹೇಶ್ ಕಜೆ ಮಾತನಾಡಿ, ಏ.೨೨ರಂದು ಸಾಯಂಕಾಲ ೪ ಗಂಟೆಗೆ ಮಂಗಳೂರಿನಲ್ಲಿ ಸಮುದಾಯದವರು ಒಟ್ಟಾಗಿ ಮಿನಿ ವಿಧಾನಸೌಧದ ಮುಂಭಾಗ ಸೇರಿ ಜಿಲ್ಲಾಧಿಕಾರಿಗಳಿಗೆ ಮನವಿ ನೀಡುವ ಕಾರ್ಯ ನಡೆಯಲಿದೆ ಎಂದರು.

ಜಿಎಲ್ ಸಮೂಹ ಸಂಸ್ಥೆಗಳ ಎಂಡಿ ಬಲರಾಮ ಆಚಾರ್ಯ, ಮೆಘಾ ಪ್ರೂಟ್ ಪ್ರೊಸೆಸಿಂಗ್ ಕಂಪನಿ ಎಂಡಿ ಸತ್ಯಶಂಕರ್ ಭಟ್, ವಕೀಲ ಎನ್.ಕೆ.ಜಗನ್ನಿವಾಸ್ ರಾವ್, ಡಾ.ಸುರೇಶ್ ಪುತ್ತೂರಾಯ, ವಿಶ್ವೇಶ್ವರ ಭಟ್ ಬಂಗಾರಡ್ಕ, ಗೋಪಾಲಕೃಷ್ಣ ಹೇರಳೆ, ವಿರೂಪಾಕ್ಷ ಮಚ್ಚಿಮಲೆ, ಮಾಜಿ ಶಾಸಕ ಸಂಜೀವ ಮಠಂದೂರು ಮತ್ತಿತರರು ಪಾಲ್ಗೊಂಡಿದ್ದರು.

ಮನವಿ ಸಲ್ಲಿಕೆ:

ಅಧಿಕಾರಿಗಳು ತೋರಿಸಿದ ವರ್ತನೆಯನ್ನು ಖಂಡಿಸಿ ಪುತ್ತೂರು ತಾಲೂಕು ಆಡಳಿತ ಸೌಧಕ್ಕೆ ತೆರಳಿ ಸಹಾಯಕ ಆಯುಕ್ತೆ ಸ್ಟೆಲ್ಲಾ ವರ್ಗೀಸ್ ಅವರಿಗೆ ಮನವಿ ಸಲ್ಲಿಸಲಾಯಿತು. ತಹಸೀಲ್ದಾರ್ ಪುರಂದರ ಹೆಗ್ಡೆ, ಸಿಬ್ಬಂದಿ ನಿತಿನ್ ಮತ್ತಿತರರು ಹಾಜರಿದ್ದರು.