ಕೋಲಾರ: ಖಾಸಗಿ ವಲಯದಲ್ಲಿ ಶೇ.75 ಉದ್ಯೋಗವನ್ನು ಕನ್ನಡಿಗರಿಗೆ ಮೀಸಲಿಡಬೇಕೆಂಬ ಶಿಫಾರಸು ಅನುಷ್ಠಾನಕ್ಕೆ ಒತ್ತಾಯಿಸಿ ನಗರದ ಎಂಜಿ ರಸ್ತೆ, ಬಸ್ ನಿಲ್ದಾಣ ವೃತ್ತ, ಎಂಬಿ ರಸ್ತೆ, ಮೆಕ್ಕೆ ವೃತ್ತದವರೆಗೆ ಮೆರವಣಿಗೆ ನಡೆಸಿದ ಕನ್ನಡಪರ ಸಂಘಟನೆಗಳು ತಹಸೀಲ್ದಾರ್ ಶೋಭಿತಾ ಮತ್ತು ಜಿಲ್ಲಾಧಿಕಾರಿ ಮಂಜುನಾಥ್‌ಗೆ ಮನವಿ ಸಲ್ಲಿಸಿದರು.
ಡಾ. ಸರೋಜಿನಿ ಮಹಿಷಿ ವರದಿ ಅನುಷ್ಠಾನಕ್ಕೆ ಒತ್ತಾಯಿಸಿ ಕನ್ನಡಪರ ಸಂಘಟನೆಗಳು ಗುರುವಾರ ಕರೆ ನೀಡಿದ್ದ ಕರ್ನಾಟಕ ಬಂದ್‌ಗೆ ರಾಜ್ಯದ ಗಡಿ ಜಿಲ್ಲೆ ಕೋಲಾರದಲ್ಲಿ ಸ್ಪಂದನೆ ವ್ಯಕ್ತವಾಗಲಿಲ್ಲವಾದರೂ ಕೆಲ ಸಂಘಟನೆಗಳು ಸಾಂಕೇತಿಕ ಪ್ರತಿಭಟನೆ ನಡೆಸಿ ಹೋರಾಟಗಾರರ ಕಳಕಳಿಗೆ ಸ್ಪಂದಿಸಿದವು.
ಕೋಲಾರ, ಶ್ರೀನಿವಾಸಪುರ ಹಾಗೂ ಮಾಲೂರಿನಲ್ಲಿ ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿದ್ದು ಹೊರತುಪಡಿಸಿ ಉಳಿದಂತೆ ಯಾವ ಸಂಘಟನೆಗಳೂ ಸ್ಪಂದಿಸಲಿಲ್ಲ. ಕೆಎಸ್ಸಾರ್ಟಿಸಿ ಬಸ್ ಸಂಚಾರ ಎಂದಿನಂತಿತ್ತು. ಖಾಸಗಿ ಬಸ್‌ಗಳು ಓಡಾಟ ನಡೆಸಿದವು. ಸರ್ಕಾರಿ ಕಚೇರಿ, ಶಾಲಾ-ಕಾಲೇಜುಗಳು, ಅಂಗಡಿ-ಮುಂಗಟ್ಟು ತೆರೆದಿದ್ದವು. ಜನಜೀವನಕ್ಕೆ ಯಾವುದೇ ತೊಂದರೆಯಾಗಲಿಲ್ಲ.
ಪ್ರತಿಭಟನೆ: ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಕಲ್ಪಿಸುವ ಸರೋಜಿನಿ ಮಹಿಷಿ ವರದಿ ಜಾರಿಗೆ ಒತ್ತಾಯಿಸಿ ಕರವೇ ಸಿಂಹಸೇನೆ ರಾಜ್ಯ ಸಮಿತಿ ನೇತೃತ್ವದಲ್ಲಿ ಕಾರ್ಯಕರ್ತರು ನಗರದ ಗಾಂಧಿವನದಲ್ಲಿ ಕೆಲ ಸಮಯ ಧರಣಿ ನಡೆಸಿದರು. ಕಳೆದ ಮೂರೂವರೆ ದಶಕಗಳ ಹಿಂದೆಯೇ ಸಲ್ಲಿಕೆಯಾಗಿದ್ದ ವರದಿಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸದ ಸರ್ಕಾರದ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಿದರು.
ಕರವೇ ಸಿಂಹಸೇನೆ ಸಂಸ್ಥಾಪಕ ಅಧ್ಯಕ್ಷ ಜಯದೇವ ಪ್ರಸನ್ನ ಮಾತನಾಡಿ, ಹಿಂದೆ ಲಾಲೂಪ್ರಸಾದ್ ಯಾದವ್ ರೈಲ್ವೆ ಸಚಿವರಾಗಿದ್ದ ಸಂದರ್ಭದಲ್ಲಿ ಬಿಹಾರಿಗಳಿಗೆ ಉದ್ಯೋಗಾವಕಾಶ ಕಲ್ಪಿಸುವ ಇಚ್ಛಾಶಕ್ತಿ ತೋರಿದ್ದರು. ಆದರೆ ರಾಜ್ಯದ ಯಾವ ರಾಜಕೀಯ ನಾಯಕರಿಗೂ ಕನ್ನಡಿಗರ ಉದ್ಯೋಗದ ವಿಚಾರದಲ್ಲಿ ಆ ಇಚ್ಛಾಶಕ್ತಿ ಇಲ್ಲ. ಕರ್ನಾಟಕ ಬಂದ್‌ಗೂ ರಾಜಕೀಯ ಹಿತಾಸಕ್ತಿಯಿಂದ ರಾಜಕೀಯ ಪಕ್ಷಗಳು ಬೆಂಬಲ ವ್ಯಕ್ತಪಡಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
1986ರಲ್ಲಿ ಸರೋಜಿನಿ ಮಹಿಷಿ ವರದಿ ಸರ್ಕಾರದ ಕೈ ಸೇರಿದ್ದರೂ ಅಲ್ಲಿಂದೀಚೆಗೆ ಬಂದ ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಸರ್ಕಾರಗಳು ವರದಿ ಅನುಷ್ಠಾನದಲ್ಲಿ ವಿಫಲವಾಗಿದ್ದು, ಕನ್ನಡಿಗರಿಗೆ ಅನ್ಯಾಯವೆಸಗಿವೆ. ರಾಜ್ಯದ ಐಟಿ-ಬಿಟಿ ಕಂಪನಿಗಳಲ್ಲಿ ಉದ್ಯೋಗ ಹೊರಗಿನವರ ಪಾಲಾಗುತ್ತಿದೆ. ವಿವಿಧ ಕ್ಷೇತ್ರಗಳಲ್ಲೂ ಕನ್ನಡಿಗರಿಗೆ ಅವಕಾಶ ಸಿಗುತ್ತಿಲ್ಲ ಎಂದು ದೂರಿದರು ಸಿಂಹಸೇನೆ ಪದಾಧಿಕಾರಿಗಳಾದ ಮಂಜು ಭಾರ್ಗವಿ, ಸುನೀತಾ, ಮಂಜುಳಾ, ಅಸ್ಲಂ, ಕೆಜಿಎಫ್ ಆನಂದ್ ಇತರರು ಪಾಲ್ಗೊಂಡಿದ್ದರು.
ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ಮೋಹನರೆಡ್ಡಿ ಸರ್ಕಾರ ಬಂದ ತಕ್ಷಣ ಸ್ಥಳೀಯರಿಗೆ ಉದ್ಯೋಗದಲ್ಲಿ ಮೀಸಲಾತಿ ಕಾಯ್ದೆ ಜಾರಿಗೆ ತಂದಿದ್ದಾರೆ. ಅದೇ ಮಾದರಿಯನ್ನೇ ರಾಜ್ಯದಲ್ಲೂ ಜಾರಿಗೆ ತರಬೇಕು. ಸರ್ಕಾರ ಸ್ಪಂದಿಸದೇ ಹೋದಲ್ಲಿ ಮುಂದಿನ ದಿನಗಳಲ್ಲಿ ಹೋರಾಟದ ಸ್ವರೂಪ ಬದಲಿಸಬೇಕಾಗುತ್ತದೆ. ಜಯದೇವ ಪ್ರಸನ್ನ, ಕರವೇ ಸಿಂಹಸೇನೆ ಸಂಸ್ಥಾಪಕ ಅಧ್ಯಕ್ಷ