ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ದೇವನಹಳ್ಳಿ ತಾಲೂಕು ತಟಮಾಚನಹಳ್ಳಿ, ಇರಿಗೇನಹಳ್ಳಿ, ಜಿ.ಹೊಸೂರು, ಬುಳ್ಳಹಳ್ಳಿ ಗ್ರಾಮಗಳು ಒಳಗೊಂಡಂತೆ ವೆಂಕಟಗಿರಿಕೋಟೆ ರೈಲ್ವೇ ನಿಲ್ದಾಣದ ಬಳಿ 100 ಎಕರೆ ವ್ಯಾಪ್ತಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಬೃಹತ್ ರೈಲ್ವೆ ಟರ್ಮಿನಲ್ ನಿಲ್ದಾಣ ಮತ್ತು ಸರ್ಕ್ಯೂಲರ್ ರೈಲ್ವೆ ಲೈನ್ ಯೋಜನೆಯನ್ನು ಕೈಬಿಡಬೇಕೆಂದು ಒತ್ತಾಯಿಸಿ ಪ್ರೋ.ನಂಜುಂಡಸ್ವಾಮಿ ಸ್ಥಾಪಿತ ರಾಜ್ಯ ರೈತ ಸಂಘ ಹಸಿರುಸೇನೆಯ ರಾಜ್ಯ ಯುವ ಘಟಕದ ಅದ್ಯಕ್ಷ ಡಾ.ಬಿ.ಕೆ.ವಿನೋದಕುಮಾರಗೌಡ ಆಗ್ರಹಿಸಿದರು.
ದೇವನಹಳ್ಳಿ ತಾಲೂಕು ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರಭಾರ ಜಿಲ್ಲಾಧಿಕಾರಿ ಕೆ.ಎನ್. ಅನುರಾಧಾ ಅವರ ಮೂಲಕ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಈ ಬಗ್ಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದರು. ರೈಲ್ವೆ ಟರ್ಮಿನಲ್ ನಿರ್ಮಿಸಲು ಉದ್ದೇಶಿಸಿರುವ ಜಮೀನಿನಲ್ಲಿ ಸಾಕಷ್ಟು ಸಣ್ಣ ಪುಟ್ಟ ರೈತರು ದ್ರಾಕ್ಷಿ, ದಾಳಿಂಬೆ, ಫಲಪುಷ್ಪ, ತರಕಾರಿಗಳನ್ನು ಬೆಳೆಯುವುದರ ಜತೆಗೆ ಹೈನುಗಾರಿಕೆಗೆ ಬೇಕಾದ ಮೇವನ್ನು ಬೆಳೆಯುತ್ತ ಹಸು, ಕುರಿ ಕೋಳಿ ಸಾಕಾಣಿಕೆ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದಾರೆ. ಇದನ್ನೇ ನಂಬಿ ಸಂಸಾರ ನಡೆಸುವ ನೂರಾರು ರೈತ ಕುಟುಂಬವಿದೆ. ಎಲ್ಲರೂ ಅರ್ಧ ಎಕರೆಯಿಂದ ಒಂದೆರಡು ಎಕರೆ ಭೂಮಿ ಹೊಂದಿರುವ ಬಡ ರೈತರಾಗಿದ್ದಾರೆ. ಈಗಾಗಲೇ ತಾಲೂಕಿನಲ್ಲಿ ಕೆಐಎಡಿಬಿ ಹೆಸರಿನಲ್ಲಿ ಸಹಸ್ರಾರು ಎಕರೆ ಕೃಷಿ ಯೋಗ್ಯ ಭೂಮಿ ಕಬಳಿಸಲಾಗಿದೆ ಈಗ ರೈಲ್ವೆ ಟರ್ಮಿನಲ್ ಹೆರಸಲ್ಲಿ ಈ ಭೂಮಿ ಕಸಿದುಕೊಂಡರೆ ನಮ್ಮ ರೈತರು ಎಲ್ಲಿ ಹೋಗಬೇಕು ಎಂದು ಪ್ರಶ್ನಿಸಿದರು. ಹಾಗಾಗಿ ನಾವು ಹೋರಾಟದ ಆರಂಭಿಕವಾಗಿ ಕೆಲ ಮುಖಂಡರು ಬಂದು ಡಿಸಿ ಮೂಲಕ ಸರ್ಕಾರಗಳಿಗೆ ಮನವಿ ಸಲ್ಲಿಸುತ್ತಿದ್ದೇವೆ. ಕೂಡಲೇ ಸರ್ಕಾರ ಮತ್ತು ರೈಲ್ವೆ ಇಲಾಖೆಯ ಅಧಿಕಾರಿಗಳ ಜತೆ ಜಿಲ್ಲಾಧಿಕಾರಿ ಮಾತನಾಡಿ ಈ ಭಾಗದ ರೈತರ ಜತೆ ಸಭೆ ನಡೆಸಬೇಕು ಇಲ್ಲವಾದಲ್ಲಿ ಬಲವಂತದ ಭೂ ಸ್ವಾಧಿನದ ವಿರುದ್ಧ ಬೃಹತ್ ಮಟ್ಟದ ಹೋರಾಟಕ್ಕೆ ಸಜ್ಜಾಗುವುದು ಶತಸಿದ್ದ ಎಂದರು.
ಭೂಮಿ ಕಸಿಯುವ ಹುನ್ನಾರ: ಕೆಐಡಿಬಿ ಹೆಸರಲ್ಲಿ ಕೃಷಿ ಭೂಮಿ ಕಸಿದು ಬಹುರಾಷ್ಟೀಯ ಕಂಪನಿಗಳಿಗೆ ಮತ್ತು ಕೆಲ ಪ್ರಭಾವಿ ರಾಜಕೀಯ ನಾಯಕರ ಕುಟುಂಬಗಳಿಗೆ ಅವರ ಹಿಂಬಾಲಕರಿಗೆ ಭೂಮಿ ಕೊಡಲು ಹೊರಟಿದ್ದಾರೆ ಇದರ ಜತೆಗೆ ಅಭಿವೃದ್ಧಿ ಹೆಸರಲ್ಲಿ ಕಾಮಗಾರಿ ಗುತ್ತಿಗೆ ಪಡೆಯುವ ಬಹುಬೇಗ ದೊಡ್ಡ ಶ್ರೀಮಂತರಾಗುವ ಯೋಜನೆಗಳು ಇವಾಗಿವೆ ಎಂದು ರೈತ ಸಂಘದ ರಾಜ್ಯ ಕಾರ್ಯದರ್ಶಿ ಕಡತನಮಲೆ ನಂಜುಂಡಪ್ಪ ದೂರಿದರು.
ಸರ್ಕಾರಗಳ ಈ ಯೋಜನೆಗಳಿಂದ ರೈತರು ಹಾಗೂ ರೈತರ ಕುಟುಂಬಗಳು ಭೂಮಿ ಕಳೆದುಕೊಂಡು ಬೀದಿಪಾಲಾಗುತ್ತಿದ್ದಾರೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಈ ರಾಜಕಾರಣಿಗಳಿಗೆ ಅನ್ನ ಬೆಳೆದು ಹಾಕಲು ಭೂಮಿಯೂ ಇರುವುದಿಲ್ಲ ರೈತರು ಇರುವುದಿಲ್ಲ ಹಾಗಾಗಿ ಸರ್ಕಾರ ಕೂಡಲೇ ಇದನ್ನು ರದ್ಧುಪಡಿಸಬೇಕು ರೈತರ ಜತೆ ಚರ್ಚಿಸದೇ ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಳ್ಳುವುದು ಸರಿಯಲ್ಲ ಇದರ ವಿರುದ್ಧ ಹೋರಾಟಕ್ಕೆ ನಮ್ಮ ರೈತರು ಒಗ್ಗೂಡದಿದ್ದರೆ ಚನ್ನರಾಯಪಟ್ಟಣ ರೈತರ ಸ್ಥಿತಿ ವೆಂಕಟಗಿರಿಕೊಟೆ ಭಾಗದ ರೈತರಿಗೂ ಆಗಲಿದೆ ಹಾಗಾಗಿ ಇದನ್ನು ಆರಂಭದಲ್ಲಿಯೇ ತಡೆಗಟ್ಟಲು ಎಲ್ಲರೂ ಒಂದಾಗಬೇಕಿದೆ ಎಂದರು.