ಜಿಲ್ಲೆ

ಸಚಿವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪ್ರತಿಭಟನೆ

ಶಿವರಾಜ.ಎಂ

ವಿಜಯವಾಣಿ ಸುದ್ದಿಜಾಲ ನೆಲಮಂಗಲ

ಸೋಲದೇವನಹಳ್ಳಿ ಮುಖ್ಯ ರಸ್ತೆಯಿಂದ ಗೋರಿನಬೆಲೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವಂತೆ ಒತ್ತಾಯಿಸಿ ಕಂದಾಯ ಸಚಿವ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ತಾಲೂಕಿನ ಗೋರಿನಬೆಲೆ ಗ್ರಾಮದಿಂದ ಭಟ್ಟರಹಳ್ಳಿ, ಮಂಚೇನಹಳ್ಳಿ, ಗುರುವನಹಳ್ಳಿಕ್ಕೆ ಸಂಪರ್ಕ ಕಲ್ಪಿಸುವ ಗ್ರಾಮಗಳ ನಕಾಶೆ ರಸ್ತೆಗೆ ಗ್ರಾಮಪಂಚಾಯಿತಿ ಸದಸ್ಯೆಯೊಬ್ಬರ ಪತಿ ಸೇರಿ ಕೆಲವರು ಒತ್ತುವರಿ ಮಾಡಿಕೊಂಡು ತಂತಿ ಬೇಲಿ ನಿರ್ಮಿಸಿದ್ದರು. ತಂತಿ ಬೇಲಿ ತೆರವು ಮಾಡಿ ಸಾರ್ವಜನಿಕರ ಸಂಚಾರಕ್ಕೆ ಅನುಕೂಲ ಮಾಡಿಕೊಡುವಂತೆ ಸ್ಥಳೀಯರು 2022ರ ಜೂ.15ರಂದು ಮನವಿ ಸಲ್ಲಿಸಿದ್ದರು. ಬಳಿಕ ಜಿಲ್ಲಾಧಿಕಾರಿ, ಲೋಕಾಯುಕ್ತರಿಗೂ ನಕಾಶೆ ರಸ್ತೆ ತೆರವುಗೊಳಿಸುವಂತೆ ಮನವಿ ಸಲ್ಲಿಸಿದ್ದು ಅಧಿಕಾರಿಗಳು ತೆರವುಮಾಡಿಲ್ಲ. ನಂತರದಲ್ಲಿ ಜ.18ರಂದು ರಾಜಸ್ವ ನಿರೀಕ್ಷಕರ ನೇತೃತ್ವದಲ್ಲಿ ತೆರವು ಮಾಡಲು ಬಂದಿದ್ದ ಅಧಿಕಾರಿಗಳು ಪ್ರಭಾವಿಗಳ ಒತ್ತಡಕ್ಕೆ ವಾಪಾಸ್ ತೆರಳಿದ್ದರು ಎಂದು ಪ್ರತಿಭಟನಕಾರರು ದೂರಿದರು.

ಹಿಂದಿನ ಶಾಸಕರ ಅವಧಿಯಲ್ಲಿ ಸುಸಜ್ಜಿತ ರಸ್ತೆ ನಿರ್ಮಾಣ ಮಾಡಿದ್ದರು. ಆದರೆ ರಾತ್ರಿ ವೇಳೆ ಏಕಾಏಕಿ ಜೆಸಿಬಿ ಮೂಲಕ ರಸ್ತೆ ಅಡ್ಡಲಾಗಿ ಕಾಲುವೆ ನಿರ್ಮಾಣ ಮಾಡಿದ್ದಾರೆ. ಇದರಿಂದ ರೈತರಿಗೆ, ವಿದ್ಯಾರ್ಥಿಗಳಿಗೆ ಅನಾನುಕೂಲವಾಗಿದೆ ಈ ಬಗ್ಗೆ ಕಂದಾಯ ಸಚಿವರು ಗಮನ ಹರಿಸಬೇಕೆಂದು ರೈತರು ಒತ್ತಾಯಿಸಿದರು.

ಬೃಹತ್ ಪ್ರತಿಭಟನೆ ಎಚ್ಚರಿಕೆ: ರೈತರ ರಾಮಣ್ಣ ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಸಚಿವರು ಗಮನ ಹರಿಸಿ ನ್ಯಾಯ ದೊರಕಿಸಿಕೊಡಬೇಕು. ನಕಾಶೆ ಒತ್ತುವರಿ ತೆರವುಗೊಳಿಸಬೇಕು. ಜತೆಗೆ ರಸ್ತೆಯನ್ನು ಹಾಳು ಮಾಡಿದಕ್ಕೆ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ತಾಲೂಕು ಕಚೇರಿ ಜಿಲ್ಲಾಧಿಕಾರಿ ಕಚೇರಿ ಬಳಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ರೈತ ಮುಖಂಡ ರಾಮಣ್ಣ ಎಚ್ಚರಿಕೆ ನೀಡಿದರು.