ಸಕಲೇಶಪುರ: ಪಟ್ಟಣದ ಸುಭಾಷ್ ಮೈದಾನಲ್ಲೇ ಸಕಲೇಶ್ವರಸ್ವಾಮಿ ಜಾತ್ರೆ ಹಾಗೂ ವಸ್ತುಪ್ರದರ್ಶನ ನಡೆಸಬೇಕು ಎಂದು ಆಗ್ರಹಿಸಿ ಹಿಂದುಪರ ಸಂಘಟನೆ ಹಾಗೂ ನಾಗರಿಕರ ವೇದಿಕೆ ಮುಂಖಂಡರು ಶನಿವಾರ ಉಪ ವಿಭಾಗಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಕಳೆದ 65 ವರ್ಷಗಳಿಂದ ಪಟ್ಟಣದಲ್ಲಿ ಪ್ರತಿವರ್ಷ ಹಳೆಸಂತೆ ಮೈದಾನದಲ್ಲಿ ಫೆಬ್ರವರಿ ತಿಂಗಳಿನಲ್ಲಿ ನಡೆಯುತ್ತಿದ್ದ ಜಾತ್ರೆಗೆ ಈ ಬಾರಿ ಪುರಸಭೆ ತ್ಯಾಜ್ಯ ಹಾಗೂ ಜಾಗದ ಸಮಸ್ಯೆ ತಲೆ ದೋರಿರುವುದರಿಂದ 66ನೇ ಜಾತ್ರೆ, ವಸ್ತುಪ್ರದರ್ಶನ ನಡೆಸುವುದು ಯಕ್ಷಪ್ರಶ್ನೆಯಾಗಿದೆ. ಅನಿವಾರ್ಯವಾಗಿ ಸುಭಾಷ್ ಮೈದಾನದಲ್ಲಿ ಜಾತ್ರೆ, ವಸ್ತುಪ್ರದರ್ಶನ ನಡೆಸಲು ತೀರ್ಮಾನಿಸಲಾಗಿದೆ. ಆದರೆ, ಇದಕ್ಕೆ ಕೆಲವು ಕ್ರೀಡಾಪಟುಗಳು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ವಸ್ತುಪ್ರದರ್ಶನಕ್ಕೆ ಬರುವ ಸಾರ್ವಜನಿಕರಿಗೆ ಈ ಬಾರಿ ಪ್ರವೇಶ ದರ ನಿಗದಿಪಡಿಸಲಾಗುವುದು. ಇದರಿಂದ ಬಂದ ಆದಾಯದಲ್ಲಿ ಮೈದಾನದ ಸಾರ್ವಾಂಗೀಣ ಅಭಿವೃದ್ಧಿ ಮಾಡಲಾಗುವುದು ಎಂದು ಶಾಸಕರು ಈಗಾಗಲೇ ಸಭೆಯಲ್ಲಿ ಹೇಳಿದ್ದಾರೆ. ಎಚ್ಚರಿಕೆ: ಶಾಸಕರ ತೇಜೋವಧೆಗಾಗಿ ಒಂದು ತಂಡ ಕೆಲಸ ಮಾಡುತ್ತಿದೆ. ಇವರ ವರ್ತನೆ ಹೀಗೆ ಮುಂದುವರಿದರೆ ಸಕಲೇಶ್ವರಸ್ವಾಮಿ ರಥೋತ್ಸವದ ವೇಳೆ ಬಾರಿ ಪ್ರತಿಭಟನೆ ನಡೆಸುವುದು ನಿಶ್ಚಿತ ಎಂದು ಎಚ್ಚರಿಸಿದ ಪ್ರತಿಭಟನಕಾರರು, ಉಪ ವಿಭಾಗಾಧಿಕಾರಿ ಶ್ರುತಿ ಅವರಿಗೆ ಮನವಿ ನೀಡಿದರು. ಭಜರಂಗದಳದ ಮುಖಂಡ ರಘು,ಬಿಜೆಪಿ ಮುಖಂಡ ವಳಲಹಳ್ಳಿ ಅಶ್ವತ್ಥ , ರುದ್ರೇಶ್,ನವೀನ್, ಭಾಸ್ಕರ್, ಬಾಳ್ಳು ಶಿವಕುಮಾರ್ ಇತರರು ಇದ್ದರು.