ತುಮಕೂರು : ಸರ್ಕಾರಿ ಪದವಿ ಕಾಲೇಜುಗಳಲ್ಲಿ ತರಗತಿ ಬಹಿಷ್ಕರಿಸಿ ವಿವಿಧ ಬೇಡಿಕೆ ಈಡೇರಿಕೆಗೆ ಪಟ್ಟು ಹಿಡಿದು ಹೋರಾಟ ನಡೆಸುತ್ತಿರುವ ಅತಿಥಿ ಉಪನ್ಯಾಸಕರು ಬೀದಿಗಿಳಿದು ಬೃಹತ್ ಮೆರವಣಿಗೆ ನಡೆಸಿದರು. ನಗರದ ಬಿಜಿಎಸ್ ವೃತ್ತದಲ್ಲಿ ಮಂಗಳವಾರ ಬೆಳಗ್ಗೆ ಜಿಲ್ಲೆಯ ವಿವಿಧೆಡೆಗಳಿಂದ ಆಗಮಿಸಿ ಸಮಾವೇಶಗೊಂಡಿದ್ದ ಸಾವಿರಾರು ಉಪನ್ಯಾಸಕರು ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಘೋಷಣೆಗಳನ್ನು ಮೊಳಗಿಸಿದರು.
ಜಿಲ್ಲಾಧಿಕಾರಿ ಕಚೇರಿಯವರೆಗೂ ಮೆರವಣಿಗೆಯಲ್ಲಿ ತೆರಳಿದ ಉಪನ್ಯಾಸಕರು, ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿ, ಸಾಂಕೇತಿಕವಾಗಿ ದಿನಪೂರ್ತಿ ಪ್ರತಿಭಟನೆ ನಡೆಸಿದರು. ಹೋರಾಟದ ನೇತೃತ್ವ ವಹಿಸಿದ್ದ ಗಂಗಾಬಿಕಾ ಮಾತನಾಡಿ, ರಾಜ್ಯದ 430 ಸರ್ಕಾರಿ ಪದವಿ ಕಾಲೇಜುಗಳಲ್ಲಿ 14564 ಅತಿಥಿ ಉಪನ್ಯಾಸಕರು ಕಳೆದ 20 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರೂ ಯಾವುದೇ ಭದ್ರತೆ ಇಲ್ಲದೆ ಅತಂತ್ರರಾಗಿದ್ದಾರೆ, ಈಗ ಅಳಿವು ಉಳಿವಿನ ಹೋರಾಟವಾಗಿದ್ದು ಸರ್ಕಾರ ನ್ಯಾಯ ಒದಗಿಸಲೇಬೇಕು ಎಂದರು.
ಶಿವಣ್ಣ ತಿಮ್ಲಾಪುರ ಮಾತನಾಡಿ, ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಒದಗಿಸಬೇಕು ಹಾಗೂ ಆತ್ಮಹತ್ಯೆಗೆ ಶರಣಾಗಿರುವ ಅತಿಥಿ ಉಪನ್ಯಾಸಕ ಹರ್ಷ ಶಾನುಭೋಗ್ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು. ಅತಿಥಿ ಉಪನ್ಯಾಸಕರ ಹೆಸರಿನಲ್ಲಿ ಆಧುನಿಕ ಜೀತ ಪದ್ಧತಿ ಆಚರಿಸುತ್ತಿರುವ ರಾಜ್ಯ ಸರ್ಕಾರ ಇದುವರೆಗೆ ಉನ್ನತ ಶಿಕ್ಷಣ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡದೇ, ಅತಿಥಿ ಉಪನ್ಯಾಸಕರಿಂದಲೇ ಕಡಿಮೆ ವೇತನಕಕ್ಕೆ ದುಡಿಸಿಕೊಳ್ಳುತ್ತಿದೆ ಎಂದು ಆಕ್ರೋಶ ಹೊರಹಾಕಿದರು. ಸಹಾಯಕ ಪ್ರಾಧ್ಯಾಪಕ ನೇಮಕಾತಿ ತಡೆ ಹಿಡಿಯಬೇಕು, ವಯೋಮಿತಿ ಅಂಚಿನಲ್ಲಿರುವ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಒದಗಿಸಬೇಕು. ಕಳೆದ 15 ವರ್ಷಗಳಿಂದಲೂ ಶಿಕ್ಷಣ ಇಲಾಖೆ ಪ್ರಗತಿಗೆ ಕಾರಣವಾಗಿರುವ ಅತಿಥಿ ಉಪನ್ಯಾಸಕರತ್ತ ಮೊದಲು ಸರ್ಕಾರ ಗಮನಹರಿಸಬೇಕು ಎಂದರು.
ತೆಲಂಗಾಣ, ಕೇರಳ, ಹರಿಯಾಣ, ಪಶ್ಚಿಮ ಮಾದರಿಯಲ್ಲಿ ನಮ್ಮ ರಾಜ್ಯದಲ್ಲಿಯೂ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಒದಗಿಸಬೇಕು, ಅತಿಥಿ ಉಪನ್ಯಾಸಕರು ನಿವೃತ್ತಿಯಾಗುವವರೆಗೆ ಗರಿಷ್ಠ ವೇತನ ನೀಡಬೇಕು ಎಂದು ಮಹೇಶ್ ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ಅತಿಥಿ ಉಪನ್ಯಾಸಕರಾದ ಡಿ.ಹೇಮಾವತಿ, ವಿಜಯಮ್ಮ, ನಿರ್ಮಲಾ ಜೆ.ಸಿ.ರಂಗಧಾಮಯ್ಯ, ಅಂಜನ್‌ಮೂರ್ತಿ, ಡಾ.ರಮೇಶ್, ಅಂಬಿಕಾ, ಸುಧಾ, ಡಾ.ಕುಮಾರ್, ಡಾ.ಶಿವಯ್ಯ, ಡಾ.ಸಿದ್ದನಾಯ್ಕ, ಸುರೇಶ್, ಕರಿಯಣ್ಣ, ಜಲಜಾಕ್ಷಿ, ಡಾ.ವೆಂಕಟೇಶಯ್ಯ ಮತ್ತಿತರರು ನೇತೃತ್ವ ವಹಿಸಿದ್ದರು.
ಸರ್ಕಾರಿ ಪದವಿ ಕಾಲೇಜುಗಳಿಗೆ ಗ್ರಹಣ ! : ಅತಿಥಿ ಉಪನ್ಯಾಸಕರನ್ನೇ ಅವಲಂಬಿಸಿರುವ ಜಿಲ್ಲೆಯಲ್ಲಿರುವ ಎಲ್ಲ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಕೆಲವು ದಿನಗಳಿಂದ ತರಗತಿ ಸ್ಥಗಿತವಾಗಿವೆ. ಮುಷ್ಕರ ಮುಂದುವರಿದಿರುವ ಹಿನ್ನೆಲೆಯಲ್ಲಿ ಅತಿಥಿ ಉಪನ್ಯಾಸಕರ ಪರವಾಗಿ ಕಾಲೇಜು ವಿದ್ಯಾರ್ಥಿಗಳು ರಸ್ತೆಗಿಳಿದು ಹೋರಾಟ ನಡೆಸುತ್ತಿದ್ದಾರೆ. ಪೂರ್ಣ ತರಗತಿಗೆ ಕ್ರಮಕೈಗೊಳ್ಳಬೇಕು ಎಂದು ಜಿಲ್ಲೆಯ ಎಲ್ಲ ಸರ್ಕಾರಿ ಪದವಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದು, ಸರ್ಕಾರ ಬೇಡಿಕೆ ಈಡೇರಿಸದಿದ್ದರೆ ವಿದ್ಯಾರ್ಥಿಗಳ ವಲಯದಲ್ಲಿಯೂ ಪ್ರತಿಭಟನೆ ತೀವ್ರಗೊಳ್ಳುವ ಸಾಧ್ಯತೆಯಿದೆ.
ಪಾಠವಿಲ್ಲದೇ, ಪರೀಕ್ಷಾ ಶುಲ್ಕಕ್ಕೆ ಅಧಿಸೂಚನೆ! : ಅತಿಥಿ ಉಪನ್ಯಾಸಕರ ಮುಷ್ಕರಿಂದ ಪದವಿ ಕಾಲೇಜುಗಳಲ್ಲಿ ಪಾಠಗಳೇ ನಡೆದಿಲ್ಲ, ಈ ಸಮಯದಲ್ಲಿ ತುಮಕೂರು ವಿವಿ ಪರೀಕ್ಷಾ ಶುಲ್ಕ ಕಟ್ಟಲು ಅಧಿಸೂಚನೆ ಹೊರಡಿಸಿರುವುದು ವಿದ್ಯಾರ್ಥಿಗಳಲ್ಲಿ ಆತಂಕ ಮೂಡಿಸಿದೆ.
ಕಳೆದೆರಡು ವರ್ಷದಿಂದ ಕರೊನಾ ಕಾರಣಕ್ಕೆ ಔಪಚಾರಿಕ ಶಿಕ್ಷಣದಿಂದ ವಂಚಿತರಾಗಿರುವ ವಿದ್ಯಾರ್ಥಿಗಳಿಗೆ ಈ ವರ್ಷವೂ ಸಮಸ್ಯೆ ತಲೆದೂರಿದೆ. ಸರ್ಕಾರ ಕೂಡಲೇ ಅತಿಥಿ ಉಪನ್ಯಾಸಕರ ಬೇಡಿಕೆ ಈಡೇರಿಸಿ, ವಿದ್ಯಾಥಿಗಳ ಹಿತಕಾಯಬೇಕಿದೆ.