ಹುಬ್ಬಳ್ಳಿ : ತಂಬಾಕು ಸೇವನೆಯಿಂದ ಯುವ ಪೀಳಿಗೆಯನ್ನು ರಕ್ಷಿಸುವುದು ಹೇಗೆ ಎಂಬ ಬಗ್ಗೆ ಯೋಜನೆಗಳನ್ನು ರೂಪಿಸುವುದರ ಜತೆಗೆ ಅವರಲ್ಲಿ ಈ ಬಗ್ಗೆ ಅರಿವು ಮೂಡಿಸಿ, ತಂಬಾಕು ನಿಯಂತ್ರಣದ ವಿಚಾರದಲ್ಲಿ ನೂತನ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಸಮಾಜ ಒಟ್ಟಾಗಿ ಪಣ ತೊಡಬೇಕಾಗಿದೆ ಎಂದು ಜಿಲ್ಲಾ ಬಿಜೆಪಿ ವೈದ್ಯಕೀಯ ಪ್ರಕೋಷ್ಠದ ಅಧ್ಯಕ್ಷ ಡಾ. ರವೀಂದ್ರ ಯಲಕಾನ ಹೇಳಿದರು.
ಇಲ್ಲಿನ ಕೇಶ್ವಾಪುರದ ಎಸ್ಬಿಐ ಹೈಯರ್ ಪ್ರೖೆಮರಿ ಶಾಲೆಯಲ್ಲಿ ಎಸ್.ಡಿ.ಎಂ. ಗ್ರಾಮೀಣ ಅಭಿವೃದ್ಧಿ ಸಂಘದ ವತಿಯಂದ ಶುಕ್ರವಾರ ಏರ್ಪಡಿಸಿದ್ದ ವಿಶ್ವ ತಂಬಾಕು ವಿರೋಧಿ ದಿನಾಚರಣೆಯಲ್ಲಿ ಅವರು, ಮಕ್ಕಳ ಅರೋಗ್ಯ, ಆಹಾರ ವಿಹಾರ ಮತ್ತು ತಂಬಾಕು ಸೇವನೆಯ ದುಷ್ಪರಿಣಾಮದ ಬಗ್ಗೆ ಮಾತನಾಡಿದರು.
ತಂಬಾಕು ಸೇವನೆಯು ಮನುಷ್ಯನ ಮೇಲೆ ಉಂಟುಮಾಡುವ ದುಷ್ಪರಿಣಾಮಗಳನ್ನು ಯುವ ಸಮುದಾಯಕ್ಕೆ ಮನಮುಟ್ಟುವಂತೆ ತಿಳಿಸಿ ಹೇಳಬೇಕಾಗಿರುವುದು ಇಂದಿನ ಅಗತ್ಯವಾಗಿದೆ. ತಂಬಾಕು ಸೇವನೆಯಿಂದ ಸಾವಿನ ಸಂಖ್ಯೆ ಜಾಸ್ತಿ ಆಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ತಂಬಾಕು ಸೇವನೆಯಿಂದ ಮಕ್ಕಳ ವಿದ್ಯಾಭ್ಯಾಸದಲ್ಲಿ ಕೊರತೆ, ಆಹಾರ ಸೇವನೆ ಕಡಿಮೆ ಆಗುತ್ತಿದೆ ಇದೆಲ್ಲಕ್ಕೂ ಪರಿಹಾರ ತಂಬಾಕು ಸೇವನೆಯಿಂದ ದೂರವಿರುವುದು ಒಳ್ಳೆಯದು ಎಂದು ಸಲಹೆ ನೀಡಿದರು.
ಪ್ರಾಂಶುಪಾಲರಾದ ಪ್ರತಿಭಾ ಹಿರೇಮಠ, ಯೋಜನಾಧಿಕಾರಿ ಸೋಮಲಿಂಗ, ರಾಜು ಬದಿ, ಹಾಗೂ ಎಸ್.ಡಿ.ಎಂ. ಕಾರ್ಯಾಗಾರದ ಪ್ರಮುಖರು ಉಪಸ್ಥಿತರಿದ್ದರು.