ಉಡುಪಿ: ಮಾನಸಿಕ ಆಘಾತದಿಂದ ನೊಂದು ಉಡುಪಿ ಬನ್ನಂಜೆಯ ಮುಖ್ಯರಸ್ತೆಯ ಬದಿಯಲ್ಲಿ ಗುರುವಾರ ರಾತ್ರಿ ಮಲಗಿದ್ದ ಮಹಿಳೆಯೋರ್ವಳನ್ನು ಸಮಾಜಸೇವಕ ವಿಶು ಶೆಟ್ಟಿ ರಕ್ಷಿಸಿದ್ದು, ಮಹಿಳಾ ಪೊಲೀಸರ ಸಹಾಯದಿಂದ ಸಖಿ ಸೆಂಟರ್ಗೆ ದಾಖಲಿಸಿದ್ದಾರೆ.
ರಕ್ಷಣಾ ಸಮಯದಲ್ಲಿ ಮಹಿಳೆಯು ತಾನು ರಾಯಚೂರು ಮೂಲದವಳಾಗಿದ್ದು, ತನ್ನ ಹೆಸರು ಲಕ್ಷ್ಮೀ (25) ಎಂದು ತಿಳಿಸಿದ್ದಾಳೆ. ಮದುವೆಯಾಗಿ ಮಕ್ಕಳಿಲ್ಲದ್ದರಿಂದ ಹಿಂಸೆ ಅನುಭವಿಸುತ್ತಿದ್ದು, ನೊಂದು ಊರುಬಿಟ್ಟು ಬಂದಿರುವುದಾಗಿ ಮಾಹಿತಿ ನೀಡಿದ್ದಾಳೆ.
ರಸ್ತೆ ಬದಿಯಲ್ಲಿ ಅಸಹಾಯಕಳಾಗಿದ್ದ ಈಕೆಯನ್ನು ಗಮನಿಸಿದ ಶ್ರೀಕಾಂತ್ ಶೆಟ್ಟಿ ಕಾರ್ಕಳ ಎಂಬವರು, ಮಹಿಳೆಯೊಂದಿಗೆ ಯಾವುದೇ ದುರಂತ ಸಂಭವಿಸಬಾರದೆಂದು ವಿಶು ಶೆಟ್ಟಿ ಅವರಿಗೆ ಮಾಹಿತಿ ನೀಡಿದ್ದರು. ವಿಶು ಶೆಟ್ಟಿ ಹಾಗೂ ಪೊಲೀಸರು ಆಗಮಿಸುವವರೆಗೆ ಸ್ಥಳದಲ್ಲಿಯೇ ನಿಂತಿದ್ದರು. ಮಹಿಳೆಯ ರಕ್ಷಣಾ ಕಾರ್ಯದಲ್ಲಿ ಪೊಲೀಸ್ ಮಹಿಳಾ ಸಿಬ್ಬಂದಿ ಎಚ್.ಸಿ. ಮಲ್ಲಿಕಾ ಸಹಕರಿಸಿದರು.
ಮಹಿಳೆಯ ಸಂಬಂಧಿಕರು ಅಥವಾ ಮಾಹಿತಿ ಇರುವವರು ಉಡುಪಿ ಮಹಿಳಾ ಠಾಣೆ ಅಥವಾ ಸಖಿ ಸೆಂಟರ್ ಸಂಪರ್ಕಿಸಬಹುದು.