ಜಿಲ್ಲೆ

ಆದಿಶಕ್ತಿ ರೇಣುಕಾ ಯಲ್ಲಮ್ಮ ದೇವಿಯಿಂದ ಗ್ರಾಮಗಳ ರಕ್ಷಣೆ

ಕುಂದಗೋಳ: ಚಾಕಲಬ್ಬಿ ಗ್ರಾಮಕ್ಕೆ ಪಂಚ ಭೂತಗಳಿಂದ ಉಂಟಾಗುವ ಕಷ್ಟ, ನಷ್ಟ, ದುಷ್ಟ ಶಕ್ತಿಯನ್ನು ಹಿಡಿದಿಡುವ ಕೆಲಸವನ್ನು ದೇವಸ್ಥಾನದ ಈ ಐದು ಕಳಸಗಳು ನಿರ್ವಹಣೆ ಮಾಡುತ್ತವೆ ಎಂದು ಮುಕ್ತಿ ಮಂದಿರದ ವಿಮಲರೇಣುಕ ವೀರಮುಕ್ತಿಮುನಿ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದರು.

ಗ್ರಾಮದ ಆದಿಶಕ್ತಿ ರೇಣುಕಾ ಯಲ್ಲಮ್ಮದೇವಿಯ ನೂತನ ಶಿಲಾದೇಗುಲ ಉದ್ಘಾಟನೆ, ಪ್ರಾಣ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಕಾರ್ಯಕ್ರಮದಲ್ಲಿ ಭಾನುವಾರ 5 ಕಳಸಾರೋಹಣ ನೆರವೇರಿಸಿ ಅವರು ಆಶೀರ್ವಚನ ನೀಡಿದರು. 5 ಕಳಸಗಳು ಗ್ರಾಮಕ್ಕೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳುತ್ತವೆ. ಈ ಗ್ರಾಮದಲ್ಲಿ ಸಂತ ಶಿಶುನಾಳ ಶರೀಫರಿಗೆ ಗಾಂಜಾ ಸೇದಲು ಬೆಂಕಿ ನೀಡಿದ ದೇವಿಗೆ ನೂತನ ಶಿಲಾದೇಗುಲ ನಿರ್ಮಾಣ ಮಾಡಿದ್ದೀರಿ. ಆ ತಾಯಿಯ ಹತ್ತಿರ ಸಂಕಲ್ಪ ಮಾಡಿಕೊಳ್ಳಿ ಎಲ್ಲವನ್ನೂ ನೆರವೇರಿಸುತ್ತಾಳೆ ಎಂದರು.

ಅಭಿನವ ಬಸವಣ್ಣನವರು ಮಾತನಾಡಿ ಸುಮಾರು 2 ಕೋಟಿ ರೂ.ಗಿಂತ ಹೆಚ್ಚು ಖರ್ಚುಮಾಡಿ ದೇವಸ್ಥಾನ ನಿರ್ಮಾಣ ಮಾಡಲಾಗಿದೆ. ದೇವಸ್ಥಾನದಲ್ಲಿ ಉತ್ತಮ ಕಾರ್ಯಗಳ ಮೂಲಕ ಪಾವಿತ್ರ್ಯತೆ ಕಾಪಾಡಿ ದೇವಿಯ ಶಕ್ತಿ ಪಡೆದುಕೊಳ್ಳಬೇಕು ಎಂದರು.

ದೇವಸ್ಥಾನದ ಶಿಲ್ಪಿ ನಾಗರಾಜ ಹುರಳೇಶ್ವರ ಹಾಗೂ ಕಮಿಟಿ ಅಧ್ಯಕ್ಷ ಹಾಗೂ ಕೆಲ ಸದಸ್ಯರನ್ನು ಸನ್ಮಾನಿಸಲಾಯಿತು. ಕುಂದಗೋಳ ಶಿವಾನಂದ ಮಠದ ಶಿವಾನಂದ ಸ್ವಾಮೀಜಿ ಹಾಗೂ ಮಹಾರಾಷ್ಟ್ರದ ಮಹಾಂತ ಸ್ವಾಮೀಜಿ ಹಾಗೂ ದೇವಸ್ಥಾನ ಅಭಿವೃದ್ಧಿ ಸಮಿತಿ ಸದಸ್ಯರು, ಪಂಚ ಕಮಿಟಿ ಸದಸ್ಯರು, ಗ್ರಾಮ ಪಂಚಾಯಿತಿ ಸದಸ್ಯರು, ಗ್ರಾಮದ ಗುರು ಹಿರಿಯರು ಇದ್ದರು.