ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ ಗ್ರಾಮದ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.  
ಜಿಲ್ಲೆ

ಪರಿಸರ ಸಮತೋಲನಕ್ಕಾಗಿ ಘೇಂಡಾ ಮೃಗಗಳ ರಕ್ಷಣೆ ಅತ್ಯಗತ್ಯ

ಗುಂಡ್ಲುಪೇಟೆ: ಮಾನವನ ದುರಾಸೆಗೆ ಘೇಂಡಾ ಮೃಗಗಳು ಬಲಿಯಾಗುತ್ತಿದ್ದು, ಅವುಗಳನ್ನು ತುರ್ತಾಗಿ ರಕ್ಷಿಸಬೇಕಾಗಿದೆ ಎಂದು ಅಂತಾರಾಷ್ಟ್ರೀಯ ಪ್ರಶಸ್ತಿ ವಿಜೇತ, ವನ್ಯಜೀವಿ ಛಾಯಾಗ್ರಾಹಕ ಆರ್.ಕೆ.ಮಧು ಹೇಳಿದರು.

ತಾಲೂಕಿನ ತೆರಕಣಾಂಬಿ ಗ್ರಾಮದ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ವಿಶ್ವ ಘೇಂಡಾಮೃಗ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿದ ಬಳಿಕ ಅಸ್ಸಾಂನ ಕಾಜಿರಂಗ ವನ್ಯಜೀವಿ ಧಾಮದಲ್ಲಿ ಸೆರೆಹಿಡಿದಿದ್ದ ಘೇಂಡಾಮೃಗ ಛಾಯಾಚಿತ್ರಗಳನ್ನು ಪ್ರದರ್ಶಿಸಿ ಮಾತನಾಡಿದರು. ಪ್ರಪಂಚದಲ್ಲಿ 5 ಬಗೆಯ ಘೇಂಡಾಮೃಗಗಳಿವೆ. ಕಳ್ಳಬೇಟೆಗೆ ಇವುಗಳು ಬಲಿಯಾಗುತ್ತಿದ್ದು ವಿನಾಶದಂಚಿನಲ್ಲಿವೆ. ಪರಿಸರ ಸಮತೋಲನಕ್ಕಾಗಿ ಇವುಗಳನ್ನು ರಕ್ಷಿಸಬೇಕಾಗಿದೆ ಎಂದರು.

ಭಾರತದಲ್ಲಿ 3,262ಘೇಂಡಾಗಳಿದ್ದು ಅಸ್ಸಾಂನ ಕಾಜಿರಂಗ ಮುಖ್ಯತಾಣವಾಗಿದೆ. ಸಸ್ಯಾಹಾರಿಯಾದ ಇದು 3500 ಕೆಜಿ ತೂಕವಿದ್ದರೂ ಇದರ ಮೆದುಳು 500 ಗ್ರಾಂ ತೂಕವಿದೆ. ಸುಮಾರು 35-47 ವರ್ಷ ಆಯಸ್ಸು ಹೊಂದಿದ್ದು, ಇದರ ಚರ್ಮ ಮಡಿಕೆಯಿಂದ ಕೂಡಿದ್ದರೂ ತುಂಬಾ ಮೃದು. ಹಾಗಾಗಿ ಇವುಗಳಿಗೆ ಸೂರ್ಯನ ಶಾಖ ತಡೆದುಕೊಳ್ಳುವ ಶಕ್ತಿಯಿಲ್ಲ ಎಂದು ತಿಳಿಸಿದರು.

ಶಾಲೆಯ ಇಂಗ್ಲಿಷ್ ಶಿಕ್ಷಕ ನಂಜುಂಡಸ್ವಾಮಿ ಮಾತನಾಡಿ, ಅಸ್ಸಾಂನಲ್ಲಿ ಮಾತ್ರ ಕಂಡುಬರುವ ಘೇಂಡಾಗಳು ಭಾರತದಲ್ಲಿ ವಿಶಿಷ್ಟ ಪ್ರಾಣಿಯಾಗಿವೆ. ನರ್ಮದಾ ತೀರದ ಕಾಜಿರಂಗ ವನ್ಯಜೀವಿಧಾಮ ಹುಲಿಗಳೂ ಹೆಸರುವಾಸಿಯಾಗಿದ್ದು ಭಾರತದ ಏಕೈಕ ಹುಲಿ ಹಾಗೂ ಘೇಂಡಾಗಳ ವನ್ಯಜೀವಿ ಧಾಮ ಎಂಬ ಹೆಮ್ಮೆಗೆ ಪಾತ್ರವಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಶಾಲೆಯ ವಿದ್ಯಾರ್ಥಿಗಳು ಹಾಗೂ ಇತರರು ಇದ್ದರು.