ಬೆಳ್ತಂಗಡಿ: ಪರಿಸರದಲ್ಲಿ ವಿವಿಧ ಜಾತಿಯ ಔಷಧೀಯ ಗಿಡಮೂಲಿಕೆಗಳಿದ್ದರೂ ನಗರಗಳು ಬೆಳೆಯುತ್ತಿದ್ದಂತೆ ಕಾಡುಗಳು ನಾಶವಾಗಿ ಅಮೂಲ್ಯ ಸಸ್ಯ ಸಂಪತ್ತು ಕಳೆದುಹೋಗುತ್ತಿದ್ದು, ಔಷಧೀಯ ಗಿಡಮೂಲಿಕೆಗಳ ವ್ಯವಸ್ಥಿತ ಸಂರಕ್ಷಣೆ ಬಗ್ಗೆ ಚಿಂತನೆ, ಸಂಶೋಧನೆ ಅಗತ್ಯ ಎಂದು ಉಜಿರೆ ಎಸ್‌ಡಿಎಂ ಎಜುಕೇಶನಲ್ ಸೊಸೈಟಿ ಕಾರ್ಯದರ್ಶಿ ಡಿ.ಹರ್ಷೇಂದ್ರ ಕುಮಾರ್ ಹೇಳಿದರು.
ಶನಿವಾರ ಉಜಿರೆ ಎಸ್‌ಡಿಎಂ ಕಾಲೇಜಿನಲ್ಲಿ ಸಸ್ಯಶಾಸ್ತ್ರ ವಿಭಾಗ ಆಯೋಜಿಸಿದ ‘ಔಷಧೀಯ ಸಸ್ಯಗಳ ವೈವಿಧ್ಯ ಮತ್ತು ಸಂರಕ್ಷಣೆ’ ಕುರಿತ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ಹಿಂದೆ ಮಕ್ಕಳು ಕಾಲ್ನಡಿಗೆಯಲ್ಲಿ ಶಾಲೆಗೆ ಹೋಗುವಾಗ ಪರಿಸರದೊಂದಿಗೆ ಒಡನಾಡಿ, ಮನೆಯಲ್ಲಿ ಹಿರಿಯರ ಮೂಲಕ ಗಿಡಗಳ ಔಷಧೀಯ ಪ್ರಯೋಜನ ಅರಿಯುತ್ತಿದ್ದರು. ಈಗ ಈ ಅವಕಾಶ ಇಲ್ಲವಾಗಿದೆ. ನಾಟಿವೈದ್ಯ ಪದ್ಧತಿಯಲ್ಲಿ ಗಿಡಮೂಲಿಕೆಗಳ ಪರಿಚಯವನ್ನು ರಹಸ್ಯವಾಗಿರಿಸುವ ಕ್ರಮವಿದೆ. ಈ ಎಲ್ಲ ಆಯಾಮಗಳಲ್ಲಿ ನೋಡಿದಾಗ ಗಿಡಮೂಲಿಕೆಗಳ ಕುರಿತು ಜಾಗೃತಿ ಹೊಂದಿ ಅವುಗಳನ್ನು ಸಂರಕ್ಷಿಸಬೇಕಿದೆ ಎಂದರು.
ಎಸ್‌ಡಿಎಂ ಎಜುಕೇಶನಲ್ ಸೊಸೈಟಿ ಕಾರ್ಯದರ್ಶಿ ಡಾ.ಸತೀಶ್ಚಂದ್ರ ಎಸ್.ಸಸ್ಯಶಾಸ್ತ್ರ ವಿಭಾಗದ ಸಸ್ಯಸೌರಭ ಭಿತ್ತಿಪತ್ರಿಕೆಯ ಒಂಬತ್ತನೇ ಸಂಚಿಕೆ ಡೈವರ್ಸಿಟಿ ಆಫ್ ಎಥ್ನೋಮೆಡಿಸಿನ್ ಬಿಡುಗಡೆಗೊಳಿಸಿದರು.
ಸಂಪನ್ಮೂಲ ವ್ಯಕ್ತಿ, ಕೇರಳ ಸರ್ಕಾರದ ಕೇರಳ ಅರಣ್ಯ ಸಂಶೋಧನಾ ಸಂಸ್ಥೆ ಮುಖ್ಯ ವಿಜ್ಞಾನಿ ಡಾ.ಯು.ಎಂ.ಚಂದ್ರಶೇಖರ್ ಮಾತನಾಡಿದರು. ಪ್ರಾಂಶುಪಾಲ ಡಾ.ಬಿ.ಎ.ಕುಮಾರ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು.
ಸಂಪನ್ಮೂಲ ವ್ಯಕ್ತಿಗಳಾದ ಕೃಷಿ ವಿಜ್ಞಾನಿ ಮತ್ತು ಲೇಖಕ (ಬೆಂಗಳೂರಿನ ಕೃಷಿ ವಿವಿ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ) ಡಾ. ಕೆ.ಎನ್.ಗಣೇಶಯ್ಯ ಹಾಗೂ ಬೆಂಗಳೂರಿನ ಕರ್ನಾಟಕ ರಾಜ್ಯ ಔಷಧಿ ಸಸ್ಯ ಪ್ರಾಧಿಕಾರದ ಸೀನಿಯರ್ ಮೆಡಿಸಿನಲ್ ಪ್ಲಾಂಟ್ಸ್ ಕನ್ಸಲ್ಟೆಂಟ್ ಡಾ.ಎಂ.ಜೆ.ಪ್ರಭು, ವಿವಿಧ ರಾಜ್ಯಗಳ ವಿವಿಧ ಕಾಲೇಜುಗಳಿಂದ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಬೆಳ್ತಂಗಡಿ ತಾಲೂಕಿನ ನಾಟಿ ವೈದ್ಯರಾದ ಸೇಸಮ್ಮ, ಡೀಕಮ್ಮ, ಪದ್ಮಾವತಿ ಹಾಗೂ ಅಪ್ಪಯ್ಯ ನಾಯ್ಕ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮ ಸಂಯೋಜಕಿ, ಸಸ್ಯಶಾಸ್ತ್ರ ಅಧ್ಯಾಪಕಿ ಶಕುಂತಲಾ ಬಿ.ಸ್ವಾಗತಿಸಿದರು. ಸಂಚಾಲಕ ಅಭಿಲಾಷ್ ಕೆ.ಎಸ್.ವಂದಿಸಿದರು. ರಶ್ಮಿ ಕಾರ್ಯಕ್ರಮ ನಿರೂಪಿಸಿದರು.